ಪತ್ನಿಯೊಂದಿಗೆ ಜಗಳ: ನಾಲ್ವರು ಮಕ್ಕಳೊಂದಿಗೆ ರೈಲಿನಡಿಗೆ ಹಾರಿದ ಪತಿ; ಐವರು ಸ್ಥಳದಲ್ಲೇ ಮೃತ್ಯು

ಸಾಂದರ್ಭಿಕ ಚಿತ್ರ (PTI)
ಫರಿದಾಬಾದ್: ತನ್ನ ಪತ್ನಿಯೊಂದಿಗಿನ ಜಗಳದಿಂದ ಬೇಸರಗೊಂಡು 45 ವರ್ಷದ ವ್ಯಕ್ತಿಯೊಬ್ಬ ತನ್ನ ನಾಲ್ವರು ಮಕ್ಕಳೊಂದಿಗೆ ರೈಲಿನ ಹಳಿಗೆ ಹಾರಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ಫರಿದಾಬಾದ್ನಲ್ಲಿ ನಡೆದಿದೆ.
ಈ ಘಟನೆ ಮಂಗಳವಾರ ಮಧ್ಯಾಹ್ನ ಸುಮಾರು 12.55 ಗಂಟೆಗೆ ನಡೆದಿದ್ದು, ಘಟನೆಗೂ ಮುನ್ನ ಮೃತ ವ್ಯಕ್ತಿ ತನ್ನ ಪತ್ನಿಯೊಂದಿಗೆ ಮನೆಯಲ್ಲಿ ಜಗಳವಾಡಿಕೊಂಡು ರೈಲು ನಿಲ್ದಾಣಕ್ಕೆ ಬಂದಿದ್ದ ಎನ್ನಲಾಗಿದೆ. ಇದರ ಬೆನ್ನಿಗೇ ಆತ ತನ್ನ ನಾಲ್ವರು ಮಕ್ಕಳೊಂದಿಗೆ ಹಳಿಗೆ ಧುಮುಕಿದ್ದು, ಚಲಿಸುತ್ತಿದ್ದ ರೈಲು ಅವರ ಮೇಲೆ ಹರಿದಿದ್ದರಿಂದ, ಅವರೆಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಿಹಾರ ಮೂಲದ ಮನೋಜ್ ಮಹತೊ ತನ್ನ ಪತ್ನಿಯೊಂದಿಗೆ ಜಗಳವಾಡಿಕೊಂಡು ಮನೆ ತೊರೆದಿದ್ದ. ಅವರಿಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು ಎಂದು ಹೇಳಲಾಗಿದೆ.
ಮಂಗಳವಾರ ಬೆಳಗ್ಗೆ ಮತ್ತೆ ಅವರಿಬ್ಬರ ನಡುವೆ ಜಗಳ ನಡೆದ ನಂತರ, ತನ್ನ ಪುತ್ರರಾದ ಪವನ್ (10), ಕರು (9), ಮುರಳಿ (5) ಹಾಗೂ ಚೋಟು (3) ಅನ್ನು ಉದ್ಯಾನವನಕ್ಕೆ ಕರೆದೊಯ್ಯುತ್ತಿದ್ದೇನೆ ಎಂದು ಹೇಳಿ ಆತ ಮನೆ ತೊರೆದಿದ್ದಾನೆ.
ಆದರೆ, ಆತ ಉದ್ಯಾನವನಕ್ಕೆ ತೆರಳುವ ಬದಲು, ದಾರಿ ಮಧ್ಯೆ ತನ್ನ ಮಕ್ಕಳಿಗೆ ಚಿಪ್ಸ್ ಹಾಗೂ ತಂಪು ಪಾನೀಯ ಕೊಡಿಸಿ, ರೈಲ್ವೆ ಹಳಿಗೆ ಕರೆದೊಯ್ದಿದ್ದಾನೆ.
ನಂತರ, ಫ್ಲೈಓವರ್ ಕೆಳಗಡೆ ಬಂದಿರುವ ಅವರೆಲ್ಲ, ಹಳಿಗಳ ಬಳಿ ಸುಮಾರು ಒಂದು ಗಂಟೆ ಕಾಲ ಕಾಯ್ದಿದ್ದಾರೆ. ರೈಲು ಬರುತ್ತಿದ್ದಂತೆಯೆ, ತನ್ನ ನಾಲ್ಕೂ ಮಕ್ಕಳನ್ನೂ ಗಟ್ಟಿಯಾಗಿ ಹಿಡಿದುಕೊಂಡಿರುವ ಮಹತೊ, ರೈಲು ಹಳಿಯ ಮೇಲೆ ನಿಂತಿದ್ದಾನೆ. ಇದನ್ನು ಕಂಡು ಮಕ್ಕಳು ಭಯದಿಂದ ಚೀರಾಡಿದರೂ, ಆತ ರೈಲು ಹಳಿಗಳನ್ನು ಬಿಟ್ಟು ಕದಲಿಲ್ಲ. ಇದರ ಬೆನ್ನಿಗೇ, ವೇಗವಾಗಿ ಧಾವಿಸುತ್ತಿದ್ದ ಗೋಲ್ಡನ್ ಟೆಂಪಲ್ ಎಕ್ಸ್ಪ್ರೆಸ್ ರೈಲು ಅವರ ಮೇಲೆ ಹರಿದಿದ್ದು, ಅವರೆಲ್ಲ ರೈಲಿನಡಿ ಸಿಲುಕಿ ಮೃತಪಟ್ಟಿದ್ದಾರೆ.
ರೈಲಿನ ಚಾಲಕ ಪದೇ ಪದೇ ರೈಲಿನ ಹಳಿಗಳಿಂದ ಹೊರ ಹೋಗುವಂತೆ ಎಚ್ಚರಿಸಿದರೂ, ಆತ ಅದಕ್ಕೆ ಜಗ್ಗಿಲ್ಲ ಎಂದು ಹೇಳಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರ ತಂಡವೊಂದು, ಛಿದ್ರಗೊಂಡಿದ್ದ ಅವರೆಲ್ಲರ ಮೃತದೇಹಗಳನ್ನು ರೈಲು ಹಳಿಗಳಿಂದ ತೆರವುಗೊಳಿಸಿದ್ದಾರೆ. ಈ ವೇಳೆ ಮಹತೊನ ಜೇಬಿನಲ್ಲಿ ಒಂದು ಪತ್ರ ಹಾಗೂ ಆತನ ಪತ್ನಿಯ ಮೊಬೈಲ್ ಸಂಖ್ಯೆ ಪೊಲೀಸರಿಗೆ ಪತ್ತೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು, "ಮಹತೊ ತನ್ನ ಪತ್ನಿ ತನಗೆ ನಿಷ್ಠಳಾಗಿಲ್ಲ ಎಂಬ ಸಂಶಯ ಹೊಂದಿದ್ದ. ಈ ಅತಿರೇಕದ ಕೃತ್ಯಕ್ಕೆ ಅದೇ ಕಾರಣವಾಗಿರಬಹುದು" ಎಂದು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಹತೊನ ಪತ್ನಿಯನ್ನು ಕರೆದೊಯ್ದಾಗ, ಮೃತದೇಹಗಳನ್ನು ಕಂಡು ಅವರು ಪ್ರಜ್ಞಾಹೀನರಾದರು ಎನ್ನಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.