ಫೆ. 16ರಂದು ‘ಗ್ರಾಮೀಣ ಬಂದ್’ಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ

ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ರೈತರ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಫೆಬ್ರವರಿ 16ರಂದು ದೇಶಾದ್ಯಂತ ‘ಗ್ರಾಮೀಣ ಬಂದ್’ಗೆ ಸೋಮವಾರ ಕರೆ ನೀಡಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕೈಗಾರಿಕೆಗಳು ಹಾಗೂ ಔಪಚಾರಿಕ ವಲಯದ ಕಾರ್ಮಿಕರನ್ನು ಅದು ಆಗ್ರಹಿಸಿದೆ.
ಸಂಪೂರ್ಣ ಗ್ರಾಮದಲ್ಲಿ ಅಂಗಡಿ, ಮಂಡಿಗಳನ್ನು ಮುಚ್ಚುವಂತೆ, ಇತರ ಚಟುವಟಿಕೆಗಳನ್ನು ನಿಲ್ಲಿಸುವಂತೆ ಹಾಗೂ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿ ನೀಡಬೇಕೆಂಬ ಬಹುಕಾಲದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಸ್ಥಳೀಯ ಪ್ರತಿಭಟನೆಯೊಂದಿಗೆ ಕೈಜೋಡಿಸುವಂತೆ ಎಸ್ಕೆಎಂ ಮನವಿ ಮಾಡಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತಾನು ನೀಡಿದ ಭರವಸೆಯಿಂದ ಹಿಂದೆ ಸರಿಯುತ್ತಿದೆ ಎಂದು ಎಸ್ಕೆಎಂ ಆರೋಪಿಸಿದೆ.
2021 ಡಿಸೆಂಬರ್ 9ರಂದು ಎಸ್ಕೆಎಂಗೆ ಲಿಖಿತವಾಗಿ ನೀಡಿದ ಕನಿಷ್ಠ ಬೆಂಬಲ ಬೆಲೆ ಹಾಗೂ ಇತರ ಬೇಡಿಕೆಗಳನ್ನು ಕೇಂದ್ರ ಸರಕಾರ ಈಡೇರಿಸಬೇಕೆಂದು ಎಸ್ಕೆಎಂ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.





