ಫೆಡರೇಶನ್ ಕಪ್-2024: ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಸ್ಪರ್ಧೆ
ನೀರಜ್ ಚೋಪ್ರಾ | PC : X
ಹೊಸದಿಲ್ಲಿ : ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮೇ 12ರಿಂದ 15ರ ತನಕ ಒಡಿಶಾದಲ್ಲಿ ನಡೆಯುವ 27ನೇ ಆವೃತ್ತಿಯ ಫೆಡರೇಶನ್ ಕಪ್ ನ್ಯಾಶನಲ್ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಲಿದ್ದಾರೆ.
ಭುವನೇಶ್ವರದಲ್ಲಿ ಮೇ 12ರಿಂದ ಆರಂಭವಾಗಲಿರುವ ಸ್ಪರ್ಧಾವಳಿಯಲ್ಲಿ ನೀರಜ್ ಚೋಪ್ರಾ ಹಾಗೂ ಕಿಶೋರ್ ಕುಮಾರ್ ಜೆನಾ ಭಾಗವಹಿಸಲಿದ್ದಾರೆ ಎಂದು ಭಾರತದ ಅತ್ಲೆಟಿಕ್ಸ್ ಒಕ್ಕೂಟ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
2021ರಲ್ಲಿ ಪಾಟಿಯಾಲದ ಫೆಡರೇಶನ್ ಕಪ್ನ ನಂತರ ಚೋಪ್ರಾ ಭಾಗವಹಿಸುತ್ತಿರುವ ಮೊದಲ ದೇಶೀಯ ಸ್ಪರ್ಧಾವಳಿ ಇದಾಗಿದೆ. ಆಗ ಅವರು 87.80 ಮೀ.ದೂರಕ್ಕೆ ಜಾವೆಲಿನ್ ಎಸೆದು ಶ್ರೇಷ್ಠ ಪ್ರದರ್ಶನ ನೀಡಿದ್ದರು.
ಪುರುಷರ ಜಾವೆಲಿನ್ ಎಸೆತ ಸ್ಪರ್ಧೆಯು ಮೇ 14 ಹಾಗೂ 15ರಂದು ಭುವನೇಶ್ವರದಲ್ಲಿ ನಡೆಯಲಿದೆ. ಮೇ 14ರಂದು ಕ್ವಾಲಿಫಿಕೇಶನ್ ನಡೆಯಲಿದ್ದು, ಮರುದಿನ ಫೈನಲ್ ಪಂದ್ಯ ನಡೆಯಲಿದೆ.
ಫೆಡರೇಶನ್ ಕಪ್ಗಿಂತ ಮೊದಲು ಎರಡು ಬಾರಿಯ ಏಶ್ಯನ್ ಗೇಮ್ಸ್ ಚಾಂಪಿಯನ್ ಚೋಪ್ರಾ ಮೇ 10ರಂದು ಸಹ ಸ್ಪರ್ಧಿ ಕಿಶೋರ್ ಕುಮಾರ್ ಜೆನಾ ಜೊತೆಗೆ ದೋಹಾ ಡೈಮಂಡ್ ಲೀಗ್ನಲ್ಲಿ ಭಾಗವಹಿಸಲಿದ್ದಾರೆ.
89.94 ಮೀ.ದೂರಕ್ಕೆ ಜಾವೆಲಿನ್ ಎಸೆದು ಜೀವನಶ್ರೇಷ್ಠ ಪ್ರದರ್ಶನ ನೀಡಿರುವ ಚೋಪ್ರಾ, ದೀರ್ಘ ಸಮಯದಿಂದ ಕಾಯುತ್ತಿರುವ 90 ಮೀ. ಮಾರ್ಕ್ ಮೀರಿ ನಿಲ್ಲುವತ್ತ ಚಿತ್ತಹರಿಸಿದ್ದಾರೆ.
26ರ ಹರೆಯದ ಚೋಪ್ರಾ 2016ರ ವಿಶ್ವ ಟಿ20 ಚಾಂಪಿಯನ್ಶಿಪ್ನಲ್ಲಿ 86.48 ಮೀ.ದೂರಕ್ಕೆ ಜಾವೆಲಿನ್ ಎಸೆದು ಅಂಡರ್-20ನಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ ಭಾರತದ ಮೊದಲ ಟ್ರ್ಯಾಕ್ ಹಾಗೂ ಫೀಲ್ಡ್ ಅತ್ಲೀಟ್ ಆಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಅತ್ಲೀಟ್ ಗೆದ್ದಿರುವ ಮೊದಲ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಪ್ರಶಸ್ತಿ ಇದಾಗಿತ್ತು.
2018ರ ಏಶ್ಯನ್ ಗೇಮ್ಸ್ನಲ್ಲಿ ಚೋಪ್ರಾ ಜಾವೆಲಿನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಅತ್ಲೀಟ್ ಆಗಿದ್ದಾರೆ. ಟೋಕಿಯೊದಲ್ಲಿ ಟ್ರ್ಯಾಕ್ ಆ್ಯಂಡ್ ಫೀಲ್ಡ್ನಲ್ಲಿ ದೇಶದ ಮೊದಲ ಒಲಿಂಪಿಕ್ಸ್ ಚಾಂಪಿಯನ್ ಎನಿಸಿಕೊಂಡು ಇತಿಹಾಸ ನಿರ್ಮಿಸಿದ್ದರು. 2023ರಲ್ಲಿ ಬುಡಾಪೆಸ್ಟ್ನಲ್ಲಿ ನಡೆದಿದ್ದ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಇದೇ ಟ್ರೆಂಡ್ ಮುಂದುವರಿಸಿದ್ದ ಚೋಪ್ರಾ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದರು.
ಚೋಪ್ರಾ ಅವರು ಫೆಡರೇಶನ್ ಕಪ್ ಗೆದ್ದ ನಂತರ ಜೂನ್ 18ರಂದು ಫಿನ್ಲ್ಯಾಂಡ್ನಲ್ಲಿ ಪಾವೊ ನುರ್ಮಿ ಗೇಮ್ಸ್ನಲ್ಲಿ ಸ್ಪರ್ಧಿಸಲಿದ್ದಾರೆ. ಸೂಪರ್ಸ್ಟಾರ್ ಥ್ರೋವರ್ ಪ್ಯಾರಿಸ್ ಗೇಮ್ಸ್ಗಿಂತ ಮೊದಲು ಯುರೋಪ್ನಲ್ಲಿ ತರಬೇತಿ ಪಡೆಯುವ ನಿರೀಕ್ಷೆ ಇದೆ. ಪ್ಯಾರಿಸ್ನಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ಉಳಿಸಿಕೊಳ್ಳಲು ಚೋಪ್ರಾ ಹೋರಾಡಲಿದ್ದಾರೆ.
ಚೋಪ್ರಾ ಹಾಗೂ ಜೆನಾ ಕಳೆದ ವರ್ಷ ಹಾಂಗ್ಝೌ ಏಶ್ಯನ್ ಗೇಮ್ಸ್ನಲ್ಲಿ ಕ್ರಮವಾಗಿ 88.88 ಮೀ. ಹಾಗೂ 87.54 ಮೀ.ದೂರಕ್ಕೆ ಜಾವೆಲಿನ್ ಎಸೆದು ಚಿನ್ನ ಹಾಗೂ ಬೆಳ್ಳಿ ಪದಕ ಬಾಚಿಕೊಂಡಿದ್ದರು. ಈ ಇಬ್ಬರು ಭಾರತದ ಜಾವೆಲಿನ್ ಎಸೆತಗಾರರು 2024ರ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ.