ದೇಶದಲ್ಲಿ ನಿರುದ್ಯೋಗ ಹೆಚ್ಚಳ : ಗರಿಷ್ಠ ಮಟ್ಟಕ್ಕೆ ತಲುಪಿದ ಮಹಿಳಾ ನಿರುದ್ಯೋಗ ದರ

ಹೊಸದಿಲ್ಲಿ: ದೇಶದಲ್ಲಿ 15 ವರ್ಷಕ್ಕಿಂತ ಮೇಲಿನವರ ನಿರುದ್ಯೋಗ ದರ ಸೆಪ್ಟೆಂಬರ್‌ನಲ್ಲಿ ಅಲ್ಪ ಏರಿಕೆ ಕಂಡಿದ್ದು, ಮಹಿಳಾ ನಿರುದ್ಯೋಗ ದರ ಮೂರು ತಿಂಗಳ ಗರಿಷ್ಠ ಮಟ್ಟ ತಲುಪಿದೆ ಎಂದು ಕಾಲಾವಧಿ ಶ್ರಮಶಕ್ತಿ ಸಮೀಕ್ಷೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಆಗಸ್ಟ್‌ನಲ್ಲಿ ದೇಶದಲ್ಲಿ ಇದ್ದ ನಿರುದ್ಯೋಗ ದರ ಶೇಕಡ 5.1 ರಿಂದ ಸೆಪ್ಟೆಂಬರ್‌ನಲ್ಲಿ ಶೇಕಡ 5.2ಕ್ಕೆ ಹೆಚ್ಚಿದೆ. ಎಲ್ಲ ವಯೋಮಾನದವರ ನಿರುದ್ಯೋಗ ದರ ಶೇಕಡ 5.1 ರಿಂದ 5.3ಕ್ಕೆ ಹೆಚ್ಚಳವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 15 ವರ್ಷಕ್ಕಿಂತ ಮೇಲಿನವರ ನಿರುದ್ಯೋಗ ದರ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿ ಶೇಕಡ 4.6ರಷ್ಟಾಗಿದ್ದು, ಆಗಸ್ಟ್‌ನಲ್ಲಿ ಈ ಪ್ರಮಾಣ ಶೇಕಡ 4.6ರಷ್ಟಿತ್ತು. ನಗರ ಪ್ರದೇಶದ ದರ ಆಗಸ್ಟ್‌ನಿಂದ ಸೆಪ್ಟೆಂಬರ್‌ಗೆ ಶೇಕಡ 0.1ರಷ್ಟು ಹೆಚ್ಚಳವಾಗಿ 6.8ರಷ್ಟಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪುರುಷರ ನಿರುದ್ಯೋಗ ಪ್ರಮಾಣ ಅಲ್ಪ ಹೆಚ್ಚಳವಾಗಿ ಶೇಕಡ 4.7ನ್ನು ತಲುಪಿದ್ದು, ಮಹಿಳೆಯರ ನಿರುದ್ಯೋಗ ದರ ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇಕಡ 0.3ರಷ್ಟು ಹೆಚ್ಚಳವಾಗಿ 4.3ರಷ್ಟಾಗಿದೆ. ನಗರ ಮಹಿಳೆಯರ ನಿರುದ್ಯೋಗ ದರ ಶೇಕಡ 8.9ರಿಂದ 9.3ಕ್ಕೆ ಹೆಚ್ಚಿದ್ದು, ನಗರ ಪುರುಷರ ನಿರುದ್ಯೋಗ ಪ್ರಮಾಣ 5.9 ಶೇಕಡದಿಂದ ಶೇಕಡ 6ಕ್ಕೆ ಹೆಚ್ಚಿದೆ.
ಅಂಕಿ ಅಂಶಗಳಿಂದ ತಿಳಿದ ಬರುವಂತೆ 15 ವರ್ಷ ಮೇಲ್ಪಟ್ಟ ವಯೋಮಾನ ಶ್ರಮ ಶಕ್ತಿಯ ಪಾಲ್ಗೊಳ್ಳುವಿಕೆ ದರ (ಎಲ್‍ಎಫ್‍ಪಿಆರ್) ಸತತ ಮೂರನೇ ವರ್ಷ ಹೆಚ್ಚಳವಾಗಿದ್ದು, 2025ರ ಜೂನ್‍ನಲ್ಲಿ 54.2ರಷ್ಟಿದ್ದ ಪ್ರಮಾಣ ಸೆಪ್ಟೆಂಬರ್‌ನಲ್ಲಿ 55.3ಕ್ಕೆ ಹೆಚ್ಚಳವಾಗಿ ಐದು ತಿಂಗಳ ಗರಿಷ್ಠ ಪ್ರಮಾಣ ತಲುಪಿದೆ.
ಗ್ರಾಮೀಣ ಪ್ರದೇಶದ ಪುರುಷರ ಎಲ್‍ಎಫ್‍ಪಿಆರ್ ಜೂನ್‍ನಲ್ಲಿ ಇದ್ದ ಶೇಕಡ 56.1 ರಿಂದ ಸೆಪ್ಟೆಂಬರ್‌ನಲ್ಲಿ 57.4ಕ್ಕೆ ಹೆಚ್ಚಿದ್ದರೆ, ನಗರ ಪ್ರದೇಶದಲ್ಲಿ ಆಗಸ್ಟ್‌ನಲ್ಲಿದ್ದ ಶೇ. 50.9ರ ದರ ಮುಂದುವರಿದಿದೆ. ಮಹಿಳೆಯರಲ್ಲಿ ಎಲ್‍ಎಫ್‍ಪಿಆರ್ ದರ ಶೇಕಡ 34.1 ಆಗಿದ್ದು, ಇದು 2025ರ ಮೇ ತಿಂಗಳ ಬಳಿಕ ಗರಿಷ್ಠ ಮಟ್ಟವಾಗಿದೆ.







