ವಿದ್ಯಾರ್ಥಿನಿಯರಿಗೆ ತಡವಾಗಿ ಸಂಜೆ ತರಗತಿಗಳನ್ನು ತೆಗೆದುಕೊಳ್ಳಬಾರದು
ಕೋಚಿಂಗ್ ಸಂಸ್ಥೆಗಳಿಗೆ ಉತ್ತರಪ್ರದೇಶ ಸರಕಾರ ನಿರ್ದೇಶನ
ಸಾಂದರ್ಭಿಕ ಚಿತ್ರ
ಲಕ್ನೋ: ವಿದ್ಯಾರ್ಥಿನಿಯರಿಗೆ ಸಂಜೆ ತಡವಾಗಿ ತರಗತಿಗಳನ್ನು ತೆಗೆದುಕೊಳ್ಳಬಾರದು ಎಂಬ ಸೂಚನೆಯನ್ನು ಉತ್ತರಪ್ರದೇಶ ಸರಕಾರವು ಖಾಸಗಿ ಕೋಚಿಂಗ್ ಸಂಸ್ಥೆಗಳಿಗೆ ನೀಡಿದೆ. ಆದರೆ, ಸರಕಾರದ ಈ ನಿರ್ಧಾರವು ತಾರತಮ್ಯದಿಂದ ಕೂಡಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಬಣ್ಣಿಸಿದ್ದಾರೆ.
ರಾಜ್ಯ ಸರಕಾರವು ಕಳೆದ ವಾರ ಆರಂಭಿಸಿದ ‘ಸುರಕ್ಷಿತ ನಗರ’ ಯೋಜನೆಯ ಭಾಗವಾಗಿ ಈ ಸೂಚನೆಯನ್ನು ಹೊರಡಿಸಲಾಗಿದೆ. ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆಯನ್ನು ಖಾತರಿಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಸರಕಾರ ಹೇಳಿದೆ.
ಆದರೆ, ಬಾಲಕಿಯರು ಮತ್ತು ಮಹಿಳೆಯರಿಗೆ ಸಂಜೆ ತಡವಾಗಿ ತರಗತಿಗಳನ್ನು ತೆಗೆದುಕೊಳ್ಳಬಾರದು ಎಂಬುದಾಗಿ ಕೋಚಿಂಗ್ ಸಂಸ್ಥೆಗಳಿಗೆ ನೀಡಲಾಗಿರುವ ಆದೇಶವು ‘‘ಅಸಂಖ್ಯಾತ ಕನಸುಗಳನ್ನು ಕೊಲ್ಲುತ್ತದೆ’’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಲವು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರಪ್ರದೇಶದ ರಸ್ತೆಗಳನ್ನು ಮಹಿಳೆಯರಿಗೆ ಸುರಕ್ಷಿತಗೊಳಿಸುವುದಾಗಿ ಬಿಜೆಪಿ ನೀಡಿರುವ ಚುನಾವಣಾ ಭರವಸೆಗಳಿಗೆ ರಾಜ್ಯ ಸರಕಾರದ ಈ ನಿರ್ಧಾರ ವ್ಯತಿರಿಕ್ತವಾಗಿದೆ ಎಂಬುದಾಗಿ ಹಲವರು ಬೆಟ್ಟುಮಾಡಿದ್ದಾರೆ.
ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸುವ ಬದಲು, ರಾಜ್ಯ ಸರಕಾರವು ಕೋಚಿಂಗ್ ತರಗತಿಗಳಿಗೆ ಹೋಗದಂತೆಮಹಿಳೆಯರನ್ನು ತಡೆಯುತ್ತಿದೆ ಎಂದು ಪತ್ರಕರ್ತೆ ಗಾರ್ಗಿ ರಾವತ್ ಹೇಳಿದ್ದಾರೆ. ‘‘ಸ್ಮಾರ್ಟ್ ನಗರ ಅಥವಾ ಸುರಕ್ಷಿತ ನಗರ ಇರಬೇಕಾದ ರೀತಿ ಇದಲ್ಲ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ರೂರ್ಕೀಯ ಮಾಜಿ ವಿದ್ಯಾರ್ಥಿನಿ ಸೈಲೀ ರಾಣೆ, ‘‘ಮಹಿಳೆಯರ ಸುರಕ್ಷತೆ’’ಗಾಗಿ ಮಹಿಳೆಯರಿಗಾಗಿ ವಿಧಿಸಲಾಗಿದ್ದ ತಡರಾತ್ರಿ ಕರ್ಫ್ಯೂಗಳನ್ನು ಸ್ಮರಿಸಿಕೊಂಡಿದ್ದಾರೆ. ‘‘ಇದು ನಿಲ್ಲಬೇಕು. ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸಲಾಗದ ಸರಕಾರವೊಂದರ ಅಸಮರ್ಥತೆಗೆ ಬಾಲಕಿಯರು ಬೆಲೆ ತೆರುವಂತಾಗಬಾರದು’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.