ಜಾನುವಾರು ಸಾಗಾಣಿಕೆ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಸಾಂದರ್ಭಿಕ ಚಿತ್ರ (PTI)
ಲಕ್ನೋ: ರಾಜ್ಯದೊಳಗೆ ಜಾನುವಾರುಗಳನ್ನು ಸಾಗಾಣಿಕೆ ಮಾಡುವುದು ಅಪರಾಧ ಎನಿಸುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ ಮಹತ್ವದ ತೀರ್ಪು ನೀಡಿದೆ.
ಗೋಹತ್ಯೆ ಕಾಯ್ದೆಯಡಿ ಜನರನ್ನು ಸಿಲುಕಿಸಿರುವ ಪ್ರಕರಣಗಳ ಪ್ರವಾಹವೇ ಹೈಕೋರ್ಟ್ ಗೆ ಹರಿದು ಬರುತ್ತಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಗೋಹತ್ಯೆ ಕಾಯ್ದೆಯ ದುರ್ಬಳಕೆ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ವೈಯಕ್ತಿಕ ಅಫಿಡವಿಟ್ಗಳನ್ನು ಸಲ್ಲಿಸುವಂತೆ ರಾಜ್ಯದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕೋರ್ಟ್ ಸೂಚನೆ ನೀಡಿದೆ.
ಈ ಸಂಬಂಧ ಉಭಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಹೈಕೋರ್ಟ್, ನವೆಂಬರ್ 7ರೊಳಗೆ ಅಫಿಡವಿಟ್ ಸಲ್ಲಿಸದೇ ಇದ್ದಲ್ಲಿ, ವೈಯಕ್ತಿಕವಾಗಿ ಹಾಜರಾಗಿ ಪ್ರತಿಕ್ರಿಯೆ ನೀಡಬೇಕು ಎಂದು ಆದೇಶ ನೀಡಿದೆ. ಇಂಥ ಪ್ರಕರಣಗಳಲ್ಲಿ ಸರ್ಕಾರದ ಮೇಲೆ ಏಕೆ ದೊಡ್ಡ ದಂಡಗಳನ್ನು ವಿಧಿಸಬಾರದು ಎಂದೂ ಈ ಇಬ್ಬರೂ ಉನ್ನತ ಅಧಿಕಾರಿಗಳನ್ನು ಪ್ರಶ್ನಿಸಿದೆ.
ಪ್ರತಾಪಗಢದ ರಾಹುಲ್ ಯಾದವ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಬ್ದುಲ್ ಮೊಯಿನ್ ಮತ್ತು ಎ.ಕೆ.ಚೌಧರಿ ಅವರನ್ನೊಳಗೊಂಡ ಪೀಠ ಅಕ್ಟೋಬರ್ 9ರಂದು ಈ ಆದೇಶ ನೀಡಿದೆ.
ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನ ತಮ್ಮದು ಎಂಬ ಏಕೈಕ ಕಾರಣಕ್ಕೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಾಗಿತ್ತು. ಒಂಭತ್ತು ಹಸುಗಳನ್ನು ಒಯ್ಯುತ್ತಿದ್ದ ವಾಹನವನ್ನು ತಮ್ಮ ಚಾಲಕ ಚಲಾಯಿಸುತ್ತಿದ್ದರು ಎಂದು ಅರ್ಜಿದಾರರು ವಾದ ಮಂಡಿಸಿದ್ದರು.
ಜಾನುವಾರುಗಳನ್ನು ವಧಿಸುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದ್ದು, ಗೋಹತ್ಯೆ ಕಾಯ್ದೆಯಡಿ ಸಿಲುಕಿಸಿರುವುದು ತಪ್ಪು ಎಂದು ವಾದಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.







