7 ದಿನಗಳಲ್ಲಿ ಅಫಿಡವಿಟ್ ಸಲ್ಲಿಸಿ ಅಥವಾ ಕ್ಷಮೆಯಾಚಿಸಿ: ರಾಹುಲ್ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ / ರಾಹುಲ್ ಗಾಂಧಿ | PC : indiatoday.in
ಹೊಸದಿಲ್ಲಿ, ಆ. 17: ರಾಹುಲ್ ಗಾಂಧಿ ಅವರು ಪುರಾವೆಗಳೊಂದಿಗೆ ಏಳು ದಿನಗಳ ಒಳಗೆ ಅಫಿಡವಿಟ್ ಸಲ್ಲಿಸಬೇಕು ಅಥವಾ ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಚುನಾವಣಾ ಆಯೋಗವು ಸೂಚಿಸಿದೆ.
ಕಾಂಗ್ರೆಸ್ ನಾಯಕ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಮತ ಕಳ್ಳತನ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಚುನಾವಣಾ ಆಯೋಗವು ಈ ಗಡುವು ನೀಡಿದೆ.
“ಅಫಿಡವಿಟ್ ನೀಡಬೇಕು ಅಥವಾ ಕ್ಷಮೆಯಾಚಿಸಬೇಕು. ಅದು ಬಿಟ್ಟು ಮೂರನೇ ಆಯ್ಕೆ ಇಲ್ಲ. ಏಳು ದಿನಗಳಲ್ಲಿ ಅಫಿಡವಿಟ್ ಸಲ್ಲಿಸಿಲ್ಲ ಎಂದಾದರೆ, ಈ ಆರೋಪಗಳು ಆಧಾರರಹಿತವೆಂದು ಪರಿಗಣಿಸಲಾಗುತ್ತದೆ” ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ರಾಹುಲ್ ಗಾಂಧಿ ಅವರ ಮತ ಕಳ್ಳತನ ಮತ್ತು ಎರಡು ಮತ ಆರೋಪವನ್ನು ಆಧಾರ ರಹಿತ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದರು.
ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯವನ್ನು ಪಾರದರ್ಶಕವಾಗಿ ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಇದೇ ವೇಳೆ ರಾಹುಲ್ ಗಾಂಧಿಯವರ ಹೇಳಿಕೆಗಳನ್ನು “ಸಂವಿಧಾನಕ್ಕೆ ಮಾಡಿದ ಅವಮಾನ”ವೆಂದು ಕರೆದ ಅವರು, ಇಂತಹ ಪದಪ್ರಯೋಗಗಳು ಪ್ರಜಾಪ್ರಭುತ್ವದ ಭಾಗವಾಗಿರುವ ಸಂಸ್ಥೆಗಳ ಗೌರವವನ್ನು ಕುಗ್ಗಿಸುತ್ತವೆ ಎಂದು ಅಭಿಪ್ರಾಯಪಟ್ಟರು.
“ಚುನಾವಣಾ ಆಯೋಗದ ಹೆಗಲ ಮೇಲೆ ಬಂದೂಕು ಇಟ್ಟು ಮತದಾರರನ್ನು ಗುರಿಯಾಗಿಸಿಕೊಂಡು ರಾಜಕೀಯ ನಡೆಯುತ್ತಿದೆ. ಆದರೆ ಆಯೋಗವು ಬಂಡೆಯಂತೆ ನಿಂತಿದ್ದು, ಬಡವರು, ಶ್ರೀಮಂತರು, ವೃದ್ಧರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲ ವರ್ಗಗಳ ಮತದಾರರೊಂದಿಗೆ ಯಾವುದೇ ತಾರತಮ್ಯವಿಲ್ಲದೆ ನಿಂತಿದೆ ಮತ್ತು ನಿಂತೇ ಇರುತ್ತದೆ” ಎಂದು ಮುಖ್ಯ ಚುನಾವಣಾ ಆಯುಕ್ತರು ಸ್ಪಷ್ಟಪಡಿಸಿದರು.
"ಎರಡು ಮತದಾನದ ಬಗ್ಗೆ ಉಂಟಾದ ಆತಂಕಕ್ಕೂ ಪ್ರತಿಕ್ರಿಯಿಸಿದ ಅವರು, ಈ ಆರೋಪಕ್ಕೆ ಇದುವರೆಗೆ ಯಾವುದೇ ಸ್ಪಷ್ಟ ಪುರಾವೆಗಳು ಲಭ್ಯವಾಗಿಲ್ಲ. ಭಾರತೀಯ ಚುನಾವಣಾ ಆಯೋಗವಾಗಲಿ ಅಥವಾ ಭಾರತದ ಮತದಾರರಾಗಲಿ, ಇಂತಹ ಸುಳ್ಳು ಆರೋಪಗಳಿಗೆ ಹೆದರುವುದಿಲ್ಲ” ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದರು.







