ಅಶ್ಲೀಲತೆಯಿರುವ ಚಿತ್ರಗಳಿಗೆ ಅನುಮತಿ ದೊರೆಯುತ್ತಿದೆ; ನೈಜತೆಯನ್ನು ಪ್ರತಿಫಲಿಸುವ ಚಿತ್ರಗಳು ಸೆನ್ಸಾರ್ ಅಡೆತಡೆ ಎದುರಿಸುತ್ತಿವೆ: ಜಾವೇದ್ ಅಖ್ತರ್ ಅಸಮಾಧಾನ

Photo Credit: The Hindu
ಮುಂಬೈ: ನೈಜತೆಯನ್ನು ಪ್ರತಿಫಲಿಸುವ ಚಿತ್ರಗಳು ಭಾರತದ ಶಾಸನಾತ್ಮಕ ಸಂಸ್ಥೆಗಳಿಂದ ಅಡೆತಡೆ ಎದುರಿಸುತ್ತಿದ್ದರೆ, ಅಶ್ಲೀಲತೆಯನ್ನು ಹೊಂದಿರುವ ಚಿತ್ರಗಳು ಸುಲಭವಾಗಿ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆಯುತ್ತಿವೆ ಎಂದು ಖ್ಯಾತ ಚಲನಚಿತ್ರ ಕತೆಗಾರ ಮತ್ತು ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಇಲ್ಲಿ ಆಯೋಜನೆಗೊಂಡಿದ್ದ ಅನಂತ್ ರಂಗ್ ಮಾನಸಿಕ ಆರೋಗ್ಯ ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಅವಧಿಯನ್ನುದ್ದೇಶಿಸಿ ಮಾತನಾಡಿದ ಜಾವೇದ್ ಅಖ್ತರ್, ಕೆಟ್ಟ ಚಿತ್ರವನ್ನು ಯಶಸ್ವಿಗೊಳಿಸುತ್ತಿರುವುದು ಪ್ರೇಕ್ಷಕರು ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.
“ಈ ದೇಶದಲ್ಲಿ ಈಗಲೂ ಅಶ್ಲೀಲ ಚಲನಚಿತ್ರಗಳು ಚಲನಚಿತ್ರ ನಿಯಂತ್ರಣ ಸಂಸ್ಥೆಗಳಿಂದ ಅನುಮೋದನೆ ಪಡೆಯುತ್ತಿವೆ. ಇವೆಲ್ಲ ತಪ್ಪು ಮೌಲ್ಯಗಳು, ಪುರುಷ ಪ್ರಧಾನ ದೃಷ್ಟಿಕೋನ ಮಹಿಳೆಯರನ್ನು ಅಗೌರವಿಸುತ್ತಿದೆ ಮತ್ತು ಇದು ಸಂವೇದನಾಶೂನ್ಯತೆ ಎಂಬುದು ಅವರಿಗೆ ತಿಳಿದಿಲ್ಲ. ಆದರೆ, ಸಮಾಜಕ್ಕೆ ಕನ್ನಡಿ ಹಿಡಿಯುವ ಚಿತ್ರಗಳ ಬಿಡುಗಡೆಗೆ ಮಾತ್ರ ಅನುಮತಿ ದೊರೆಯುತ್ತಿಲ್ಲ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಚಲನಚಿತ್ರಗಳು ಕೇವಲ ನೈಜತೆಯನ್ನು ತೋರಿಸಲು ಮಾತ್ರ ಪ್ರಯತ್ನಿಸುತ್ತವೆ ಎಂದೂ ಅವರು ಹೇಳಿದ್ದಾರೆ.
“ಚಲನಚಿತ್ರವೊಂದು ನೀವು ಸಮಾಜವನ್ನು ಇಣುಕಿ ನೋಡುವ ಕಿಟಕಿಯಾಗಿದೆ. ಹಾಗಿದ್ದರೆ ಆ ಕಿಟಕಿಯನ್ನು ಮುಚ್ಚಿಬಿಡಿ. ಆದರೆ, ಆ ಕಿಟಕಿಯನ್ನು ಮುಚ್ಚುವ ಮೂಲಕ, ಸಮಾಜದಲ್ಲಿ ಆಗುತ್ತಿರುವುದನ್ನು ಪರಿಹರಿಸಲು ಸಾಧ್ಯವಿಲ್ಲ” ಎಂದೂ ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ಚಲನಚಿತ್ರಗಳಲ್ಲಿ ಪೌರುಷತ್ವವನ್ನು ಪ್ರದರ್ಶಿಸುವುದರಿಂದ ಮಾನಸಿಕ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮದ ಕುರಿತೂ ಪ್ರತಿಕ್ರಿಯಿಸಿದ ಅವರು, ಇಂತಹ ಚಲನಚಿತ್ರಗಳ ಜನಪ್ರಿಯತೆ ಸಮಾಜದ ಸಮ್ಮತಿಯಲ್ಲಿ ಅಡಗಿದೆ ಎಂದು ಅಭಿಪ್ರಾಯಪಟ್ಟರು.







