ಜಿಎಸ್ಟಿ ನೋಂದಣಿಗೆ ಲಂಚದ ಆರೋಪ: ತೆರಿಗೆತಜ್ಞರ ಪೋಸ್ಟ್ ವೈರಲ್ ಬೆನ್ನಲ್ಲೇ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ
ಆರೋಪ ನಿರಾಕರಿಸಿದ ಸಿಬಿಐಸಿ

ನಿರ್ಮಲಾ ಸೀತಾರಾಮನ್ (PTI)
ಹೊಸದಿಲ್ಲಿ : ಜಿಎಸ್ಟಿ ನೋಂದಣಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಪ್ರಮುಖ ತೆರಿಗೆತಜ್ಞರೋರ್ವರು ಲಿಂಕ್ಡ್ಇನ್ನಲ್ಲಿ ಪೋಸ್ಟ್ ಮಾಡಿರುವ ಬೆನ್ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ವಿಜಿ ಲರ್ನಿಂಗ್ ಡೆಸ್ಟಿನೇಶನ್ ಸಂಸ್ಥಾಪಕ ವಿನೋದ್ ಗುಪ್ತಾ, ಲಿಂಕ್ಡ್ಇನ್ನಲ್ಲಿ ಮಾಡಿದ ಪೋಸ್ಟ್ನಲ್ಲಿ ʼ20 ದಿನಗಳಿಂದ ಪತ್ನಿ ಮತ್ತು ನಾನು ನಡೆಸುತ್ತಿರುವ ಸಂಸ್ಥೆಯ ಜಿಎಸ್ಟಿ ನೋಂದಣಿ ಸಂಖ್ಯೆಗಾಗಿ ಕಾಯುತ್ತಿದ್ದೇವೆ. ಲಂಚ ನೀಡಲು ಸಿದ್ಧರಿದ್ದರೆ ಶೀಘ್ರದಲ್ಲೇ ಜಿಎಸ್ಟಿ ಸಂಖ್ಯೆ ನೀಡುವುದಾಗಿ ನಮಗೆ ಹೇಳಿದ್ದಾರೆʼ ಎಂದು ಆರೋಪಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಅಭಿಷೇಕ್ ರಾಜಾ ರಾಮ್ ಸೇರಿದಂತೆ ಹಲವರು GST ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.
ʼGST ನೋಂದಣಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ(CBIC)ಗೆ ತಿಳಿದಿಲ್ಲ. ದೇಶವನ್ನು ಭ್ರಷ್ಟಾಚಾರದಿಂದ ರಕ್ಷಿಸಲು ಉನ್ನತ ಮಟ್ಟದ ಅಧಿಕಾರಿಗಳು GST ನೋಂದಣಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಿದೆʼ ಎಂದು ರಾಜಾ ರಾಮ್ ಎಕ್ಸ್ನಲ್ಲಿ ಬರೆದಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತೆರಿಗೆದಾರರ ಸೇವೆ ನಮ್ಮ ಜವಾಬ್ದಾರಿ. ಆದರೆ ಈ ಸೇವೆ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿರಬೇಕು. ಏಕೆಂದರೆ ನಾವು ಅವರ ವಿಶ್ವಾಸವನ್ನು ಗಳಿಸಬೇಕಿದೆ. ಜಿಎಸ್ಟಿ ಮಂಡಳಿ ಮತ್ತು ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಜಾಗರೂಕರಾಗಿ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ(CBIC) ಈ ಕುರಿತು ಪ್ರತಿಕ್ರಿಯಿಸಿ, ಗುಪ್ತಾ ಅವರು ಮೇ 26ರಂದು ಅರ್ಜಿಯನ್ನು ಸಲ್ಲಿಸಿದ್ದಾರೆ. ಅದು ದಿಲ್ಲಿ ರಾಜ್ಯ GST ವ್ಯಾಪ್ತಿಗೆ ಒಳಪಟ್ಟಿದೆ ಹೊರತು ಕೇಂದ್ರ GST ಅಧಿಕಾರಿಗಳ ವ್ಯಾಪ್ತಿಗೆ ಬರುವುದಿಲ್ಲ. ಅರ್ಜಿಯನ್ನು ಪರಿಶೀಲಿಸಿ ಬಾಡಿಗೆಗೆ ಸಂಬಂಧಿಸಿದ ಒಪ್ಪಂದಗಳ ಬಗ್ಗೆ ಸ್ಪಷ್ಟನೆ ಕೇಳಲಾಗಿದೆ. ಗುಪ್ತಾ ಇನ್ನೂ ನೋಟಿಸ್ಗೆ ಪ್ರತಿಕ್ರಿಯಿಸಿಲ್ಲ. ವಾಸ್ತವವನ್ನು ಪರಿಶೀಲಿಸದೆ ದಾರಿತಪ್ಪಿಸುವ ಮಾಹಿತಿಯನ್ನು ಯಾರೂ ಹಂಚಿಕೊಳ್ಳಬಾರದು ಎಂದು ಹೇಳಿದೆ.
A detailed response from @cbic_india. To provide service to the taxpayer is our duty. While so serving the taxpayers, transparency and integrity are crucial in earning their trust and confidence. Confident that the Board and the field formations will remain sensitive and… https://t.co/OwuHQ5yKhe
— Nirmala Sitharaman (@nsitharaman) May 31, 2025







