ಕಳೆದೊಂದು ದಶಕದಲ್ಲಿ ಸೈಬರ್ ವಂಚನೆಗಳಿಂದ ನಷ್ಟಗಳು 10 ಪಟ್ಟು ಏರಿಕೆ: ವಿತ್ತ ಸಚಿವಾಲಯ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಕಳೆದೊಂದು ದಶಕದಲ್ಲಿ ಸೈಬರ್ ವಂಚನೆಗಳಿಂದಾಗಿ ನಷ್ಟಗಳು ಸುಮಾರು 10 ಪಟ್ಟು ಏರಿಕೆಯಾಗಿವೆ ಎಂದು ಕೇಂದ್ರ ಸಹಾಯಕ ವಿತ್ತ ಸಚಿವ ಪಂಕಜ ಚೌಧರಿಯವರು ತಿಳಿಸಿದ್ದಾರೆ.
ಸೋಮವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಚೌಧರಿ, 2014-15ರಲ್ಲಿ 18.46ಕೋಟಿ ರೂ.ಗಳಷ್ಟಿದ್ದ ಸೈಬರ್ ವಂಚನೆಗಳಿಂದಾಗಿ ನಷ್ಟದ ಪ್ರಮಾಣವು 2023-24ರಲ್ಲಿ 177.05 ಕೋಟಿ ರೂ.ಗೇರಿದೆ. ವಿತ್ತವರ್ಷ 2025ರ ಮೊದಲ ಒಂಭತ್ತು ತಿಂಗಳುಗಳಲ್ಲಿ (2024 ಎಪ್ರಿಲ್-ಡಿಸೆಂಬರ್) ಸೈಬರ್ ವಂಚನೆಯಿಂದಾಗಿ ನಷ್ಟ 107.21 ಕೋಟಿ ರೂ.ಗಳಷ್ಟಿತ್ತು ಎಂದು ತಿಳಿಸಿದರು.
ವಿತ್ತವರ್ಷ 2015ರಲ್ಲಿ 815ರಷ್ಟಿದ್ದ ಒಂದು ಲಕ್ಷ ರೂ.ಅಥವಾ ಹೆಚ್ಚಿನ ಮೊತ್ತದ ಸೈಬರ್ ವಂಚನೆ ಪ್ರಕರಣಗಳು ವಿತ್ತವರ್ಷ 2024ರಲ್ಲಿ 29,082ಕ್ಕೆ ಏರಿಕೆಯಾಗಿವೆ. ವಿತ್ತವರ್ಷ 2025ರ ಮೊದಲ ಒಂಭತ್ತು ತಿಂಗಳುಗಳಲ್ಲಿ (2024 ಎಪ್ರಿಲ್-ಡಿಸೆಂಬರ್) ಇಂತಹ ಪ್ರಕರಣಗಳ ಸಂಖ್ಯೆ 13,384ರಷ್ಟಿತ್ತು ಎಂದು ತಿಳಿಸಿದ ಸಚಿವರು, ದೇಶದಲ್ಲಿ ಡಿಜಿಟಲ್ ಪಾವತಿ ವಹಿವಾಟುಗಳು ಹೆಚ್ಚುತ್ತಿದ್ದಂತೆ ವಂಚನೆ ಪ್ರಕರಣಗಳೂ ಹೆಚ್ಚುತ್ತಿದ್ದು,ಡಿಜಿಟಲ್ ಪಾವತಿ ವಂಚನೆಗಳೂ ಇವುಗಳಲ್ಲಿ ಸೇರಿವೆ ಎಂದರು.
ಕೇಂದ್ರ ಗೃಹಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ(I4C)ದ ಪ್ರಕಾರ,ಸೈಬರ್ ವಂಚನೆಗಳಿಂದಾಗಿ ಮುಂದಿನ ವರ್ಷದಲ್ಲಿ ಭಾರತೀಯರು 1.2 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಸೈಬರ್ ಅಪರಾಧದ ಬಲಿಪಶುಗಳಿಗೆ ನೆರವಾಗಲು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಮತ್ತು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ (1930)ಯನ್ನು ಆರಂಭಿಸಿದೆ. ಹೆಚ್ಚುವರಿಯಾಗಿ ದೂರಸಂಪರ್ಕ ಇಲಾಖೆಯು ಕರೆಗಳು,ಎಸ್ಎಂಎಸ್ ಅಥವಾ ವಾಟ್ಸ್ಆ್ಯಪ್ ಸಂದೇಶಗಳ ಮೂಲಕ ಶಂಕಿತ ವಂಚಕ ಸಂದೇಶಗಳನ್ನು ವರದಿ ಮಾಡಲು ಸಾರ್ವಜನಿಕರಿಗೆ ಸಾಧ್ಯವಾಗುವಂತೆ ಡಿಜಿಟಲ್ ಇಂಟೆಲಿಜೆನ್ಸ್ ಪ್ಲ್ಯಾಟ್ಫಾರ್ಮ್ ಮತ್ತು ಸಂಚಾರ ಸಾಥಿ ವೆಬ್ಸೈಟ್ನಲ್ಲಿ ‘ಚಕ್ಷು’ ಸೌಲಭ್ಯವನ್ನು ಪರಿಚಯಿಸಿದೆ ಎಂದು ಚೌಧರಿ ತಿಳಿಸಿದರು.
ಆದರೂ,ಸೈಬರ್ ಅಪರಾಧ ಸೇರಿದಂತೆ ಅಪರಾಧಗಳ ತಡೆಗಟ್ಟುವಿಕೆ,ಪತ್ತೆ,ತನಿಖೆ ಮತ್ತು ವಿಚಾರಣೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹೊಣೆಗಾರಿಕೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕೇಂದ್ರ ಸರಕಾರವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕಾನೂನು ಜಾರಿ ಸಂಸ್ಥೆಗಳ ಸಾಮರ್ಥ್ಯವೃದ್ಧಿಗಾಗಿ ಸಲಹೆಗಳು ಮತ್ತು ವಿವಿಧ ಯೋಜನೆಗಳಡಿ ಆರ್ಥಿಕ ನೆರವಿನ ಮೂಲಕ ಅವುಗಳ ಉಪಕ್ರಮಗಳನ್ನು ಬೆಂಬಲಿಸುತ್ತದೆ ಎಂದು ಹೇಳಿದ ಚೌಧರಿ, ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ(CERT-In)ವು ಎಚ್ಚರಿಕೆಗಳು ಮತ್ತು ಸಲಹೆಗಳನ್ನು ಹೊರಡಿಸುವ, ಅಣಕು ಸೈಬರ್ ಭದ್ರತಾ ಕಾರ್ಯಾಚರಣೆಗಳ ಮೂಲಕ ಡಿಜಿಟಲ್ ತಂತ್ರಜ್ಞಾನಗಳ ಸುರಕ್ಷಿತ ಬಳಕೆಗಾಗಿ ಮತ್ತು ಸೈಬರ್ ವಂಚನೆಗಳನ್ನು ತಡೆಯಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.







