ಪಾಕ್ ಮೊಬೈಲ್ ಸಂಖ್ಯೆಯಲ್ಲಿ 'ವರ್ಗೀಕೃತ ಮಾಹಿತಿ' ಸೋರಿಕೆ ಮಾಡಿದ ಆರೋಪ: ಹಣಕಾಸು ಸಚಿವಾಲಯದ ಉದ್ಯೋಗಿ ನವೀನ್ ಪಾಲ್ ಬಂಧನ

ಸಾಂದರ್ಭಿಕ ಚಿತ್ರ (Credit : ddnews.gov.in)
ಹೊಸದಿಲ್ಲಿ: ಜಿ-20 ಶೃಂಗಸಭೆಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ರಹಸ್ಯ ಹಾಗೂ ವರ್ಗೀಕೃತ ದಾಖಲೆಗಳನ್ನು ಪಾಕಿಸ್ತಾನದ ಮೊಬೈಲ್ ಸಂಖ್ಯೆಗೆ ರವಾನಿಸಿದ ಆರೋಪದ ಮೇಲೆ ಹಣಕಾಸು ಸಚಿವಾಲಯದ ಉದ್ಯೋಗಿಯನ್ನು ಗಾಝಿಯಾಬಾದ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವ್ಯಕ್ತಿ ರಾಷ್ಟ್ರೀಯ ಭದ್ರತೆ ಹಾಗೂ ಹಿತಾಸಕ್ತಿಗಳಿಗೆ ಧಕ್ಕೆ ತರುವಂತಹ ಕೃತ್ಯಗಳಲ್ಲಿ ತೊಡಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕೃತ ರಹಸ್ಯ ಕಾಯಿದೆ ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಗಾಝಿಯಾಬಾದ್ನ ಭೀಮ್ ನಗರದ ನಿವಾಸಿ ನವೀನ್ ಪಾಲ್ (27 ವರ್ಷ) ಎಂದು ಗುರುತಿಸಲಾಗಿದೆ. ಪಾಲ್ ಭಾರತ ಸರಕಾರದ ಹಣಕಾಸು ಸಚಿವಾಲಯದೊಂದಿಗೆ ಗುತ್ತಿಗೆಯ ಆಧಾರದಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) ಆಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಪಾಲ್ ರಹಸ್ಯ ದಾಖಲೆಗಳನ್ನು ಯಾರಿಗೊ ಹಂಚಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿಯನ್ನು ನಾವು ಪಡೆದಿದ್ದೇವೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಹಣ ತೆಗೆದುಕೊಂಡ ನಂತರ ಆತನು ಕೆಲವು ದಾಖಲೆಗಳನ್ನು ಅಪರಿಚಿತ ಮೂಲಕ್ಕೆ ಹಂಚಿಕೊಂಡಿದ್ದಾನೆ ಎಂಬುದನ್ನು ನಾವು ಆತನ ಫೋನ್ ಮೂಲಕ ಪರಿಶೀಲಿಸಿದ್ದೇವೆ ”ಎಂದು ಗಾಝಿಯಾಬಾದ್ನ ಡಿಸಿಪಿ (ಗ್ರಾಮೀಣ) ಶುಭಂ ಪಟೇಲ್ ಹೇಳಿದರು







