ಗುಜರಾತ್ | ತಂದೆ-ಪುತ್ರನನ್ನು ನಕಲಿ ಎನ್ ಕೌಂಟರ್ ನಲ್ಲಿ ಹತ್ಯೆಗೈದ ಆರೋಪ: 7 ಮಂದಿ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಎಫ್ಐಆರ್

ಗುಜರಾತ್ ಹೈಕೋರ್ಟ್ | PTI
ಅಹಮದಾಬಾದ್: ನಾಲ್ಕು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ಗುಜರಾತ್ ನ ಸುರೇಂದ್ರನಗರ್ ಜಿಲ್ಲೆಯಲ್ಲಿ ತಂದೆ-ಮಗನನ್ನು ನಕಲಿ ಎನ್ ಕೌಂಟರ್ ನಲ್ಲಿ ಹತ್ಯೆಗೈದಿದ್ದ ಆರೋಪದ ಮೇಲೆ ಏಳು ಮಂದಿ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿರೇಂದ್ರ ಸಿನ್ಹ್ ಎನ್. ಜಡೇಜಾ ಹಾಗೂ ಅವರ ಸಹೋದ್ಯೋಗಿಗಳಾದ ರಾಜೇಶ್ ಸವಿಭಾಯಿ, ಕಿರೀಟ್ ಭಾಯಿ ಗಣೇಶ್ ಭಾಯಿ, ದಿಗ್ವಿಜಯ್ ಸಿನ್ಹ್ ಹರ್ದೀಪ್ ಸಿನ್ಹ್, ಪ್ರಹ್ಲಾದ್ ಭಾಯಿ ಪ್ರಭು ಭಾಯಿ ಹಾಗೂ ಮನುಭಾಯಿ ಗೋವಿಂದ್ ಭಾಯಿ ಸೇರಿದಂತೆ ಒಟ್ಟು ಏಳು ಮಂದಿ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಶುಕ್ರವಾರ ಪಟ್ಡಿ ತಾಲ್ಲೂಕಿನ ಬಜಾನಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆ ಆರೋಪ ಹಾಗೂ ಇನ್ನಿತರ ಆರೋಪಕ್ಕೆ ಸಂಬಂಧಿಸಿದಂತೆ ಏಳು ಮಂದಿ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲಾಗಿರುವುದನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ದೃಢಪಡಿಸಿದ್ದಾರೆ. 2021ರಲ್ಲಿ ಪಟ್ಡಿ ತಾಲ್ಲೂಕಿನಲ್ಲಿ ನಡೆದಿತ್ತೆನ್ನಲಾದ ಈ ನಕಲಿ ಎನ್ ಕೌಂಟರ್ ಪ್ರಕರಣದ ತನಿಖೆ ನಡೆಸಲು ಪುರೋಹಿತ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ಇದಕ್ಕೂ ಮುನ್ನ, ಪೊಲೀಸ್ ಕಾರ್ಯಾಚರಣೆಯ ವೇಳೆ ರೌಡಿ ಶೀಟರ್ ಹನೀಫ್ ಜಾಟ್ ಮಲಿಕ್ (44) ಹಾಗೂ ಪುತ್ರ ಮದೀನ್ (14) ಅನ್ನು ಆರೋಪಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿರೇಂದ್ರ ಸಿನ್ಹ್ ಎನ್. ಜಡೇಜಾ ನೇತೃತ್ವದ ತಂಡವು ಗುಂಡು ಹಾರಿಸಿ ಹತ್ಯೆಗೈದಿತ್ತು. ಇದರ ಬೆನ್ನಿಗೇ, ನವೆಂಬರ್ 6, 2021ರಂದು ಬಜಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಗೆಡಿಯಾ ಗ್ರಾಮದಲ್ಲಿ ನನ್ನ ತಂದೆ ಹಾಗೂ ನನ್ನ ಸಹೋದರನನ್ನು ನಕಲಿ ಎನ್ ಕೌಂಟರ್ ನಲ್ಲಿ ಅಮಾನುಷವಾಗಿ ಹತ್ಯೆಗೈಯ್ಯಲಾಗಿದೆ ಎಂದು ಆರೋಪಿಸಿ ಮೃತ ಹನೀಫ್ ಜಾಟ್ ಮಲಿಕ್ ಅವರ ಪುತ್ರಿ ಸೊಹಾನಾ ಮಲಿಕ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.







