ನೇತಾಜಿ ಸಾವಿನ ಕುರಿತು ಪೋಸ್ಟ್: ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲು

ರಾಹುಲ್ ಗಾಂಧಿ (PTI)
ಕೋಲ್ಕತ್ತಾ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆಯ ಪ್ರಯುಕ್ತ, ಜನವರಿ 23ರಂದು ತಾವು ಮಾಡಿದ್ದ ಎಕ್ಸ್ ಪೋಸ್ಟ್ ನಲ್ಲಿ ಅವರ ನಿಧನದ ದಿನಾಂಕವನ್ನೂ ಉಲ್ಲೇಖಿಸಿದ್ದ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಕೋಲ್ಕತ್ತಾ ಮೂಲದ ಪೊಲೀಸ್ ಠಾಣೆಯೊಂದರಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಈ ಎಫ್ಐಆರ್ ಅನ್ನು ಅಖಿಲ ಭಾರತೀಯ ಹಿಂದೂ ಮಹಾಸಭಾ ಎಂಬ ಸ್ವಯಂಘೋಷಿತ ಹಿಂದೂ ಸಂಘಟನೆ ದಕ್ಷಿಣ ಕೋಲ್ಕತ್ತಾದಲ್ಲಿರುವ ಭವಾನಿಪುರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದೆ. ಎಫ್ಐಆರ್ ದಾಖಲಿಸಿದ ನಂತರ, ಸಂಘಟನೆಯ ಕಾರ್ಯಕರ್ತರು ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಪೂರ್ವಜರ ನಿವಾಸವಿರುವ ಎಲ್ಗಿನ್ ರಸ್ತೆ ಹಾಗೂ ದಕ್ಷಿಣ ಕೋಲ್ಕತ್ತಾದಲ್ಲೂ ರಾಹುಲ್ ಗಾಂಧಿ ಅವರ ವಿವಾದಾತ್ಮಕ ಪೋಸ್ಟ್ ಅನ್ನು ಪ್ರತಿಭಟಿಸಿ ಧರಣಿ ನಡೆಸಿದರು.
ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಚಂದ್ರಚೂಡ್ ಗೋಸ್ವಾಮಿ ಪ್ರಕಾರ, “ನೇತಾಜಿಯವರನ್ನು ಮೊದಲಿಗೆ ಕಾಂಗ್ರೆಸ್ ತೊರೆಯುವಂತೆ ಮಾಡಿ, ನಂತರ ದೇಶದಿಂದ ನಿರ್ಗಮಿಸಿದಂತೆ ಮಾಡಿದ ಪರಂಪರೆಯನ್ನೇ ರಾಹುಲ್ ಗಾಂಧಿ ಅನುಸರಿಸುತ್ತಿದ್ದಾರೆ. ರಾಹುಲ್ ಗಾಂಧಿ ಹಾಗೂ ಅವರ ಪೂರ್ವಜರು ಯಾವಾಗಲೂ ನೇತಾಜಿಯವರ ನೆನಪನ್ನು ಭಾರತೀಯರ ಸ್ಮೃತಿಯಿಂದ ಅಳಿಸಿ ಹಾಕುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅದಕ್ಕೆ ಭಾರತೀಯರು ಅವರಿಗೆ ಶಿಕ್ಷೆ ನೀಡಲಿದ್ದಾರೆ. ನಮಗೆ ಸಂಬಂಧ ಪಟ್ಟಂತೆ, ನೇತಾಜಿ ಕುರಿತ ಮಾಹಿತಿಯನ್ನು ಯಾರೇ ತಿರುಚಲು ಯತ್ನಿಸಿದರೂ ನಾವು ಯಾವಾಗಲೂ ಪ್ರತಿಭಟಿಸುತ್ತೇವೆ” ಎಂದು ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಕಾಂಗ್ರೆಸ್ ಸಂಸದರೂ ಆದ ರಾಹುಲ್ ಗಾಂಧಿ, ನೇತಾಜಿ ಸುಭಾಶ್ ಚಂದ್ರ ಬೋಸ್ ಆಗಸ್ಟ್ 18, 1945ರಲ್ಲಿ ತೀರಿಕೊಂಡರು ಎಂದು ಉಲ್ಲೇಖಿಸಿದ್ದರು. ಆ ದಿನಾಂಕವು ನೇತಾಜಿ ಸುಭಾಶ್ ಚಂದ್ರ ಬೋಸ್ ರನ್ನು ಸಲ್ವಾಂವ್ ನಿಂದ ಯುಎಸ್ಎಸ್ಆರ್ ಆಕ್ರಮಿಸಿಕೊಂಡಿದ್ದ ಮಂಚೂರಿಯಾ ಕಡೆ ಕರೆದೊಯ್ಯುತ್ತಿದ್ದ ಹಾಗೂ ತೈಹೋಕು (ಸದ್ಯ ತೈಪೆಯಲ್ಲಿದೆ) ವಿಮಾನವು ಪತನಗೊಂಡ ದಿನಾಂಕವೇ ಆಗಿತ್ತು.
ಆದರೆ, ನೇತಾಜಿ ಕಣ್ಮರೆಯಾದ ಆಗಸ್ಟ್ 18, 1945 ಅನ್ನೇ ನೇತಾಜಿ ಅವರು ಮೃತಪಟ್ಟ ಖಚಿತ ದಿನ ಎಂದು ದೃಢಪಡಿಸಲು ಯಾವುದೇ ಆಯೋಗಗಳಿಂದಲೂ ಆಗಿಲ್ಲ.
ರಾಹುಲ್ ಗಾಂಧಿ ಅವರ ಪೋಸ್ಟ್ ಅನ್ನು ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ವಿರೋಧ ಪಕ್ಷವಾದ ಬಿಜೆಪಿ ಸೇರಿದಂತೆ ಹಲವಾರು ಪಕ್ಷಗಳು ಟೀಕಿಸಿವೆ.







