ಕೇರಳ ಕರಾವಳಿಯಾಚೆ ಸಿಂಗಾಪುರದ ಹಡಗಿನಲ್ಲಿ ಬೆಂಕಿ; 18 ಮಂದಿಯ ರಕ್ಷಣೆ, ನಾಲ್ವರು ನಾಪತ್ತೆ

Photo credit: indiatoday.in
ತಿರುವನಂತಪುರ: ಸಿಂಗಾಪುರದ ಧ್ವಜವನ್ನು ಹೊತ್ತಿರುವ ‘ಎಂವಿ ವಾನ್ ಹೈ 503’ ಕಂಟೇನರ್ ಹಡಗು ಸೋಮವಾರ ಬೆಳಿಗ್ಗೆ ಕೇರಳದ ಬೇಪೋರ್ ಮತ್ತು ಅಳಿಕ್ಕಳ ಬಂದರುಗಳ ನಡುವೆ ಬೆಂಕಿಗಾಹುತಿಯಾಗಿದೆ. ಬೇಪೋರ್ನಿಂದ ಸುಮಾರು 78 ನಾಟಿಕಲ್ ಮೈಲು ದೂರದಲ್ಲಿ ಈ ಅವಘಡ ಸಂಭವಿಸಿದೆ. ಸರಣಿ ಸ್ಫೋಟಗಳು ಮತ್ತು ಬೆಂಕಿಯ ಬಳಿಕ ಹಡಗಿನಲ್ಲಿಯ 20 ಕಂಟೇನರ್ಗಳು ಸಮುದ್ರಕ್ಕೆ ಬಿದ್ದಿವೆ ಎಂದು ವರದಿಯಾಗಿದೆ. ಕಂಟೇನರ್ವೊಂದರಲ್ಲಿ ಉಂಟಾದ ಸ್ಫೋಟದಿಂದಾಗಿ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
270 ಮೀ.ಉದ್ದದ ಈ ಹಡಗು ಜೂ.7ರಂದು ಶ್ರೀಲಂಕಾದ ಕೊಲಂಬೋ ಬಂದರಿನಿಂದ ಹೊರಟಿದ್ದು,ಜೂ.10ರಂದು ಮುಂಬೈ ತಲುಪುವ ನಿರೀಕ್ಷೆಯಿತ್ತು. ಹಡಗಿನಲ್ಲಿ 22 ಸಿಬ್ಬಂದಿಗಳಿದ್ದು,ಅಪರಾಹ್ನ 12:40ರ ಸುಮಾರಿಗೆ ಬೆಂಕಿ ಇತರ ಕಂಟೇನರ್ಗಳಿಗೂ ಹರಡಿದಾಗ ಅವರಲ್ಲಿ 18 ಜನರು ಸಮುದ್ರಕ್ಕೆ ಜಿಗಿದಿದ್ದರು. ಅವರನ್ನು ಭಾರತೀಯ ನೌಕಾಪಡೆಯು ರಕ್ಷಿಸಿದೆ. ಆರಂಭದಲ್ಲಿ ಬೆಂಕಿ ನಂದಿಸಲು ಯತ್ನಿಸಿದ್ದ ಇಬ್ಬರು ತೈವಾನ್, ಓರ್ವ ಇಂಡೋನೇಷ್ಯಾ ಮತ್ತು ಓರ್ವ ಮ್ಯಾನ್ಮಾರ್ ಪ್ರಜೆ ಸೇರಿದಂತೆ ನಾಲ್ವರು ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗದೆ. ಐವರು ಸಿಬ್ಬಂದಿಗಳು ಗಾಯಗೊಂಡಿದ್ದು,ಇಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಹಡಗನ್ನು ಬೆಂಕಿಯ ಜ್ವಾಲೆಗಳು ಆವರಿಸಿದ್ದು,ಅದು ಸಮುದ್ರದಲ್ಲಿ ಓಲಾಡುತ್ತಿದೆ ಎಂದು ಕೊಚ್ಚಿಯ ರಕ್ಷಣಾ ಪಿಆರ್ಒ ತಿಳಿಸಿದರು.
ಸೋಮವಾರ ಬೆಳಿಗ್ಗೆ ಮುಂಬೈನ ಸಾಗರ ಕಾರ್ಯಾಚರಣೆ ಕೇಂದ್ರವು ನೀಡಿದ್ದ ಮಾಹಿತಿಯ ಮೇರೆಗೆ ಭಾರತೀಯ ನೌಕಾಪಡೆ ಮತ್ತು ತಟರಕ್ಷಣಾ ಪಡೆ ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದವು. ಕೊಚ್ಚಿಯನ್ನು ಪ್ರವೇಶಿಸಲಿದ್ದ ಐಎನ್ಎಸ್ ಸೂರತ್ ಅನ್ನು ತಿರುಗಿಸಿ ಸಂಕಷ್ಟದಲ್ಲಿರುವ ಹಡಗಿಗೆ ನೆರವನ್ನು ಒದಗಿಸಲು ರವಾನಿಸಲಾಗಿದೆ ಎಂದು ರಕ್ಷಣಾ ಪಿಆರ್ಒ ತಿಳಿಸಿದರು.