‘FIR ಗಳು ನನಗೆ ಪದಕಗಳಿದ್ದಂತೆ’ | ಮತಗಟ್ಟೆಯಲ್ಲಿ ಐಡಿ ಪರಿಶೀಲಿಸಿದ್ದನ್ನು ಸಮರ್ಥಿಸಿಕೊಂಡ ಬಿಜೆಪಿಯ ಮಾಧವಿ ಲತಾ

ಮಾಧವಿ ಲತಾ | PC : PTI
ಹೈದರಾಬಾದ್: ಸೋಮವಾರ ಇಲ್ಲಿಯ ಮತಗಟ್ಟೆಯೊಂದರಲ್ಲಿ ಮುಸ್ಲಿಮ್ ಮಹಿಳೆಯರ ಬುರ್ಕಾಗಳನ್ನು ತೆಗೆಸಿ ಅವರ ಐಡಿಗಳನ್ನು ಪರಿಶೀಲಿಸುವ ಮೂಲಕ ವಿವಾದಕ್ಕೆ ಸಿಲುಕಿರುವ ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ, FIR ಗಳು ತನಗೆ ಪದಕಗಳಿದ್ದಂತೆ ಎಂದು ಹೇಳಿಕೊಳ್ಳುವ ಮೂಲಕ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
ಮಂಗಳವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಲತಾ,‘ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳು ಮತ ಚಲಾಯಿಸುತ್ತಿದ್ದಾಗ ಮತಗಟ್ಟೆ ಅಧಿಕಾರಿಗಳು ಆಕೆಯನ್ನು ಹಿಡಿದಿದ್ದಾರೆ ಎಂಬ ಮಾಹಿತಿ ನಮಗೆ ಲಭಿಸಿದೆ. ಈ ಬಗ್ಗೆ ಅವರು FIR ದಾಖಲಿಸುತ್ತಿಲ್ಲ. ಅವರು ನನ್ನ ವಿರುದ್ಧ FIR ದಾಖಲಿಸಲು ಸ್ವತಂತ್ರರಿದ್ದಾರೆ. ಆದರೆ ಇತರರ ವಿರುದ್ಧ ಅಲ್ಲ. ‘ರಾಮ ಬಾಣ’ದಿಂದ ನನ್ನ ವಿರುದ್ಧ FIR ಆರಂಭವಾಗಿತ್ತು. ನಾನು ಪದಕಗಳ ರೂಪದಲ್ಲಿ ನನ್ನ ವಿರುದ್ಧ FIR ಗಳನ್ನು ಪಡೆಯುತ್ತಿದ್ದೇನೆ’ ಎಂದು ಹೇಳಿದರು.
ಲತಾ ವಿರುದ್ಧ FIR ದಾಖಲಾಗಿದ್ದು ಇದೇ ಮೊದಲಲ್ಲ. ಕಳೆದ ತಿಂಗಳು ವೈರಲ್ ಆಗಿದ್ದ ವೀಡಿಯೊವೊಂದು ಚುನಾವಣಾ ರ್ಯಾಲಿ ಸಂದರ್ಭದಲ್ಲಿ ಲತಾ ಸಮೀಪದ ಮಸೀದಿಯತ್ತ ಬಾಣ ಬಿಡುತ್ತಿರುವ ಭಂಗಿಯನ್ನು ಪ್ರದರ್ಶಿಸಿದ್ದನ್ನು ತೋರಿಸಿತ್ತು. ಇದು ವ್ಯಾಪಕ ಟೀಕೆಗಳಿಗೆ ಗುರಿಯಾಗಿತ್ತು. ಬಳಿಕ ಅವರು ತಾನು ಮಸೀದಿಯನ್ನು ಗುರಿಯಾಗಿಸಿಕೊಂಡಿದ್ದೆ ಎನ್ನುವುದನ್ನು ಅವರು ನಿರಾಕರಿಸಿದ್ದರಾದರೂ, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದರು.
ಸೋಮವಾರ ಇಲ್ಲಿಯ ಅಝಂಪುರದಲ್ಲಿಯ ಮತಗಟ್ಟೆಯೊಂದಕ್ಕೆ ಭೇಟಿ ನೀಡಿದ್ದ ಲತಾ, ಮುಸ್ಲಿಮ್ ಮಹಿಳಾ ಮತದಾರರ ಅವರ ಐಡಿಗಳನ್ನು ಪರಿಶೀಲಿಸಿ, ಬುರ್ಕಾಗಳನ್ನು ತೆಗೆಸಿ ಅವರ ಗುರುತನ್ನು ಖಚಿತಪಡಿಸಿಕೊಂಡಿದ್ದರು. ಈ ಬಗ್ಗೆ ಮತಗಟ್ಟೆ ಅಧಿಕಾರಿಗಳು ಅವರ ವಿರುದ್ಧ ಪೋಲಿಸ್ ದೂರು ದಾಖಲಿಸಿದ್ದರು.
ತನ್ನ ಕ್ರಮವು ಚುನಾವಣಾ ಕೇವಲ ಚುನಾವಣಾ ಪ್ರಕ್ರಿಯೆಯ ಪ್ರಾಮಾಣಿಕತೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನವಾಗಿತ್ತು ಎಂದು ಸಮರ್ಥಿಸಿಕೊಂಡ ಲತಾ, ಶೇ.90ರಷ್ಟು ಮತಗಟ್ಟೆಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಆರೋಪಿಸಿದರು.
ತನ್ನ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಮತಗಟ್ಟೆಯಲ್ಲಿ ಉಪಸ್ಥಿತ ಮಹಿಳಾ ಪೋಲಿಸ್ ನಿಷ್ಕ್ರಿಯತೆಯಿಂದಾಗಿ ತಾನು ಮಧ್ಯಪ್ರವೇಶಿಸುವುದು ಅನಿವಾರ್ಯವಾಗಿತ್ತು ಎಂದು ಹೇಳಿಕೊಂಡರು.
ಲತಾ ಎಐಎಂಐಎಂ ವರಿಷ್ಠ ಅಸದುದ್ದೀನ್ ಉವೈಸಿ ವಿರುದ್ಧ ಸ್ಪರ್ಧಿಸಿದ್ದಾರೆ.







