ನಾಳೆ(ಜು.21)ಯಿಂದ ಸಂಸತ್ತಿನ ಮುಂಗಾರು ಅಧಿವೇಶನ; ರಾಜ್ಯಸಭೆಯಲ್ಲಿ ಮೊದಲ ದಿನವೇ ಏರ್ ಇಂಡಿಯಾ ಪತನ ಕುರಿತು ಪ್ರಶ್ನೆಗಳನ್ನೆತ್ತಲಿರುವ ಸಂಸದರು

Photo Credit: PTI
ಹೊಸದಿಲ್ಲಿ,ಜು.20: ಅಹ್ಮದಾಬಾದ್ ನಲ್ಲಿ ಏರ್ ಇಂಡಿಯಾದ ಬೋಯಿಂಗ್ 787-8 ‘ಡ್ರೀಮ್ಲೈನರ್’ ವಿಮಾನದ ಪತನದ ಬಳಿಕ ಉದ್ಭವಿಸಿರುವ ಹಲವಾರು ಪ್ರಶ್ನೆಗಳು ಸೋಮವಾರದಿಂದ ಆರಂಭಗೊಳ್ಳಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರತಿಧ್ವನಿಸಲಿವೆ.
‘ಡ್ರೀಮ್ಲೈನರ್’ವಿಮಾನ ಅಪಘಾತಕ್ಕೆ ವಿಧ್ವಂಸಕ ಕೃತ್ಯದ ಆಯಾಮವಿದೆಯೇ? ಬ್ಲ್ಯಾಕ್ ಬಾಕ್ಸ್ ದತ್ತಾಂಶಗಳನ್ನು ವಿಶ್ಲೇಷಣೆಗಾಗಿ ವಿದೇಶಕ್ಕೆ ಕಳುಹಿಸಿದರೆ ಅದಕ್ಕೆ ಸಂಬಂಧಿಸಿದಂತೆ ಬೋಯಿಂಗ್ ಸಂಸ್ಥೆಯು ದುರುದ್ದೇಶದಿಂದ ಏನಾದರೂ ಮಾಡಬಹುದೇ? ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿಯ ನಿಯಂತ್ರಕ ವೈಫಲ್ಯಗಳು ಮತ್ತು ಸುರಕ್ಷತಾ ಮಾನದಂಡಗಳ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯೊಂದನ್ನು ರಚಿಸಲಾಗುತ್ತದೆಯೇ?; ಇವು ಅಧಿವೇಶನದ ಮೊದಲ ವಾರದಲ್ಲಿ ಪ್ರತಿಪಕ್ಷಗಳ ಸುಮಾರು 50 ಸಂಸದರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಶ್ನೆವೇಳೆಯಲ್ಲಿ ಎತ್ತಲಿರುವ ಕನಿಷ್ಠ 41 ಪ್ರಶ್ನೆಗಳಲ್ಲಿ ಸೇರಿವೆ.
ಲೋಕಸಭೆಯಲ್ಲಿ 23 ಮತ್ತು ರಾಜ್ಯಸಭೆಯಲ್ಲಿ 11 ಸೇರಿದಂತೆ 34 ಪ್ರಶ್ನೆಗಳು ಏರ್ ಇಂಡಿಯಾ ಅಪಘಾತವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಿವೆ. ಕನಿಷ್ಠ ಏಳು ಪ್ರಶ್ನೆಗಳು ನಾಗರಿಕ ವಾಯುಯಾನ ಕ್ಷೇತ್ರದಲ್ಲಿ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿವೆ. ಆದರೆ ಇವು ಜೂ.12ರ ಏರ್ ಇಂಡಿಯಾ ವಿಮಾನ ಪತನವನ್ನು ನೇರವಾಗಿ ಉಲ್ಲೇಖಿಸುವುದಿಲ್ಲ.
ನಿಗದಿಯಂತೆ ನಾಗರಿಕ ವಾಯುಯಾನ ಸಚಿವಾಲಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಪ್ರತಿ ಸೋಮವಾರ ರಾಜ್ಯಸಭೆಯಲ್ಲಿ ಮತ್ತು ಗುರುವಾರ ಲೋಕಸಭೆಯಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ. ಹೀಗಾಗಿ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ ಏರ್ ಇಂಡಿಯಾ ವಿಮಾನ ಪತನ ಕುರಿತು ಸಂಸದರ ಪ್ರಶ್ನೆಗಳಿಗೆ ರಾಜ್ಯಸಭೆ ಸಾಕ್ಷಿಯಾಗಲಿದೆ.
ನಿರ್ದಿಷ್ಟ ದಿನಾಂಕದಂದು ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಲು ಸಂಸದರು ಅವುಗಳನ್ನು ಕನಿಷ್ಠ ಎರಡು ವಾರ ಮೊದಲು ಸಲ್ಲಿಸಬೇಕಾಗುತ್ತದೆ. ಹೀಗಾಗಿ ಜುಲೈ 21 ಮತ್ತು ಜುಲೈ 24ರ ಪ್ರಶ್ನೆಗಳಲ್ಲಿ ವಿಮಾನ ಅಪಘಾತ ತನಿಖಾ ಬ್ಯೂರೊ(ಎಎಐಬಿ) ಸಲ್ಲಿಸಿರುವ ತನ್ನ ಪ್ರಾಥಮಿಕ ವರದಿ ಸೇರಿದಂತೆ ಇತ್ತೀಚಿನ ಬೆಳವಣಿಗೆಗಳು ಒಳಗೊಂಡಿಲ್ಲ.
ಉದಾಹರಣೆಗೆ, ಜು.24ರಂದು ಕೈಗತ್ತಿಕೊಳ್ಳಲು ನಾಗರಿಕ ವಾಯುಯಾನ ಸಚಿವಾಲಯಕ್ಕೆ ಪ್ರಶ್ನೆಗಳನ್ನು ಸಲ್ಲಿಸಲು ಸಂಸದರಿಗೆ ಜು.8ರ ಗಡುವನ್ನು ನೀಡಲಾಗಿತ್ತು. ಆದರೆ, ಸಂಸದರು ಇತ್ತೀಚಿನ ಬೆಳವಣಿಗೆಗಳ ಕುರಿತು ಪ್ರಶ್ನೆಗಳನ್ನು ಮುಂಬರುವ ವಾರಗಳಲ್ಲಿ ಕೇಳಬಹುದು.
ಮುಖ್ಯ ತನಿಖಾಧಿಕಾರಿಯ ನೇಮಕದಲ್ಲಿ ವಿಳಂಬವನ್ನು ಪ್ರಶ್ನಿಸಿರುವ ಕಾಂಗ್ರೆಸ್ ಸದಸ್ಯ ಮನೀಷ್ ತಿವಾರಿಯವರು, ವಾಯುಯಾನ ಸಂಬಂಧಿತ ಘಟನೆಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಕ ವೈಫಲ್ಯಗಳು ಮತ್ತು ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಲು ಜೆಪಿಸಿಯನ್ನು ರಚಿಸುವ ಪ್ರಸ್ತಾವ ಸರಕಾರದ ಮುಂದಿದೆಯೇ ಎಂದು ಕೇಳಿದ್ದಾರೆ.
ಡಿಎಂಕೆಯ ದಯಾನಿಧಿ ಮಾರನ್ ಅವರು ಟಾಟಾ ಗ್ರೂಪ್ ಏರ್ ಇಂಡಿಯಾವನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ಅದರ ವಿಮಾನಗಳ ಸುರಕ್ಷತೆಯ ಕುರಿತು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ದ ಮೇಲ್ವಿಚಾರಣೆಯ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದಾರೆ.
ರಾಜ್ಯಸಭೆಯಲ್ಲಿ ಬಿಜೆಪಿಯ ಅಶೋಕ್ ಚವಾಣ್ ಅವರು ಸೋಮವಾರ ಈ ವಿಷಯವನ್ನು ಎರಡನೇ ಪ್ರಶ್ನೆಯಾಗಿ ಕೇಳುವ ಅವಕಾಶವನ್ನು ಪಡೆದಿದ್ದು, 24 ಪ್ರಶ್ನೆಗಳಿಗೆ ಲಿಖಿತ ಉತ್ತರವನ್ನು ನೀಡಲಾಗುತ್ತದೆ.
ತನಿಖಾಧಿಕಾರಿಗಳು ಯಾವುದೇ ವಿಧ್ವಂಸಕ ಕೃತ್ಯದ ಕೋನದಿಂದ ತನಿಖೆ ನಡೆಸುತ್ತಿದ್ದಾರೆಯೇ ಎಂದು ರಾಜ್ಯಸಭೆ ಸಂಸದರಾದ ಡಿಎಂಕೆಯ ಡಾ.ಕನಿಮೋಳಿ ಎನ್ ವಿ ಎನ್ ಸೋಮು ಮತ್ತು ವೈ ಎಸ್ ಆರ್ ಕಾಂಗ್ರೆಸ್ ನ ಯೆರ್ರಂ ವೆಂಕಟಸುಬ್ಬಾ ರೆಡ್ಡಿ ಅವರು ಕೇಳಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ನ ಕೆ.ಸುಧಾಕರನ್ ಮತ್ತು ಸುಧಾ ಆರ್.,ಸಿಪಿಎಂನ ಅಮರಾ ರಾಮ್ ಮತ್ತು ಜನಸೇನಾದ ಬಾಲಶೌರಿ ವಲ್ಲಭನೇನಿ ಅವರೂ ಸಂಭಾವ್ಯ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಗೃಹ ಕಾರ್ಯದರ್ಶಿ ನೇತೃತ್ವದ ಉನ್ನತಮಟ್ಟದ ಸಮಿತಿ, ಸಂತ್ರಸ್ತರಿಗೆ ಪಾವತಿಸಲಾದ ಪರಿಹಾರ ಮತ್ತು ವಿಮಾನಯಾನ ಸಂಸ್ಥೆಗಳು ವರದಿ ಮಾಡಿರುವ ದೋಷಗಳು ಹಾಗೂ ಸುರಕ್ಷತಾ ಲೆಕ್ಕಪರಿಶೋಧನೆಯಲ್ಲಿನ ಲೋಪಗಳ ಬಗ್ಗೆಯೂ ಸಂಸದರು ಪ್ರಶ್ನೆಗಳನ್ನು ಕೇಳಿದ್ದಾರೆ.







