ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ವಯಸ್ಕ ಹಂತಕ್ಕೆ ತಲುಪುತ್ತಿರುವ ಭಾರತೀಯ ಸಂಜಾತ ಚೀತಾ

PC : PTI
ಭೋಪಾಲ್: ಸೋಮವಾರದಂದು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರತದಲ್ಲಿ ಜನಿಸಿದ 16 ಚೀತಾಗಳ ಪೈಕಿ ಒಂದು ಚೀತಾ ವಯಸ್ಕ ಹಂತ ತಲುಪುತ್ತಿದ್ದು, ಚೀತಾಗಳನ್ನು ಮರುಪರಿಚಯಿಸುವ ಮೂರು ವರ್ಷಗಳ ಪ್ರಯತ್ನಕ್ಕೆ ಆಶಾವಾದಿ ತಿರುವು ದೊರೆತಿದೆ ಎಂದು ರವಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ನಮೀಬಿಯಾ ಚೀತಾ ಜ್ವಾಲಾಗೆ ಮಾರ್ಚ್ 29, 2023ರಂದು ಜನಿಸಿದ್ದ ಮುಖಿ ಎಂಬ ಹೆಣ್ಣು ಚೀತಾ ಸೋಮವಾರ 915 ದಿನಗಳು ಅಥವಾ 30 ತಿಂಗಳನ್ನು ಪೂರೈಸುವ ಮೂಲಕ ವಯಸ್ಕ ಹಂತಕ್ಕೆ ತಲುಪಿದೆ. ಆ ಮೂಲಕ, ಭಾರತದಲ್ಲಿನ ಚೀತಾ ಸಂಖ್ಯೆ ಹೆಚ್ಚಳಕ್ಕೆ ಕೊಡುಗೆ ನೀಡಲು ಸಿದ್ಧವಾಗಿದೆ” ಎಂದು ಚೀತಾ ಯೋಜನೆಯ ನಿರ್ದೇಶಕ ಉತ್ತಮ್ ಕುಮಾರ್ ಶರ್ಮ ಹೇಳಿದ್ದಾರೆ.
ಜ್ವಾಲಾ ಜನ್ಮ ನೀಡಿದ್ದ ನಾಲ್ಕು ಮರಿ ಚೀತಾಗಳ ಪೈಕಿ ಮೂರು ಚೀತಾಗಳು ತೀವ್ರ ಉಷ್ಣತೆಯ ಕಾರಣಕ್ಕೆ ಮೃತಪಟ್ಟಿದ್ದವು. ಆದರೆ, ಮುಖಿ ಬದುಕುಳಿದಿದ್ದು, ಚೆನ್ನಾಗಿ ಬೆಳೆದು ನಿಂತಿದೆ. ಇಂದು ನಮ್ಮ ಪ್ರಯತ್ನಗಳಿಗೆ ಪ್ರೋತ್ಸಾಹದಾಯಕ ಫಲಿತಾಂಶ ದೊರೆತಿದೆ” ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ನಮೀಬಿಯಾದಿಂದ ತಂದಿದ್ದ ಎಂಟು ಚೀತಾಗಳನ್ನು ಸೆಪ್ಟೆಂಬರ್ 17, 2022ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕುನೊದಲ್ಲಿನ ವಿಶೇಷ ಪಂಜರಕ್ಕೆ ಬಿಡುಗಡೆಗೊಳಿಸಿದ್ದರು. ಇದು ವಿಶ್ವದ ಅತಿ ದೊಡ್ಡ ಮಾಂಸಾಹಾರಿ ವನ್ಯಜೀವಿಗಳ ಪ್ರಪ್ರಥಮ ಖಂಡಾಂತರ ಸ್ಥಳಾಂತರಕ್ಕೆ ಸಾಕ್ಷಿಯಾಗಿತ್ತು.







