'ಒಂದು ರಾಷ್ಟ್ರ ಒಂದು ಚುನಾವಣೆ' ಸಮಿತಿಯ ಮೊದಲ ಸಭೆ; ರಾಮ್ ನಾಥ್ ಕೋವಿಂದ್ ಅಧ್ಯಕ್ಷತೆ

Photo: PTI
ಹೊಸದಿಲ್ಲಿ: ದೇಶದಾದ್ಯಂತ ಏಕಕಾಲಕ್ಕೆ ರಾಷ್ಟ್ರೀಯ, ರಾಜ್ಯ ಮತ್ತು ಪಂಚಾಯತ್ ಚುನಾವಣೆಗಳನ್ನು ನಡೆಸಲು ಕೇಂದ್ರ ಸರ್ಕಾರದ 'ಒಂದು ರಾಷ್ಟ್ರ ಒಂದು ಚುನಾವಣೆ' ಬಗ್ಗೆ ಪರಿಶೀಲಿಸಲು ರಚಿಸಲಾದ ಉನ್ನತ ಮಟ್ಟದ ಸಮಿತಿಯ ಮೊದಲ ಸಭೆಯನ್ನು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶನಿವಾರ ನಡೆಸಿದರು ಎಂದು ndtv ವರದಿ ಮಾಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಸಿ ಕಶ್ಯಪ್, ಕಾಂಗ್ರೆಸ್ ಮಾಜಿ ನಾಯಕ ಗುಲಾಂ ನಬಿ ಆಜಾದ್ ಮತ್ತು ಇತರ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಒಟ್ಟಿಗೆ ಮಾಡುವ ಬಗ್ಗೆ ಸಮಿತಿಯು ಪರಿಶೀಲನೆ ನಡೆಸಿ ಚುನಾವಣೆಗಳನ್ನು ನಡೆಸಬಹುದಾದ ಚೌಕಟ್ಟು ಮತ್ತು ಸಮಯದ ಮಿತಿಯ ಬಗ್ಗೆ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಲಿದೆ.
ಎಲ್ಲ ಹಂತಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತು ಪರಿಶೀಲನೆ ನಡೆಸಿ ಶಿಫಾರಸು ಮಾಡುವಂತೆ ಎಂಟು ಸದಸ್ಯರ ಸಮಿತಿಗೆ ಸೆಪ್ಟೆಂಬರ್ 2ರಂದು ಸರ್ಕಾರ ಸೂಚನೆ ನೀಡಿತ್ತು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಮಿತಿಯಿಂದ ಹೊರಗಿಟ್ಟು, ಕಾಂಗ್ರೆಸ್ ಮಾಜಿ ನಾಯಕ ಆಜಾದ್ ಅವರನ್ನು ಸೇರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಸಮಿತಿಯ ಭಾಗವಾಗಲು ನಿರಾಕರಿಸಿದ್ದರು.







