ಭೋಪಾಲ ಅನಿಲ ದುರಂತ | ತ್ಯಾಜ್ಯದ ಪ್ರಾಯೋಗಿಕ ದಹನದ ಮೊದಲ ಹಂತ ಪೂರ್ಣ

Photo : PTI
ಇಂದೋರ್ : 1984ರ ಭೋಪಾಲ ಅನಿಲ ದುರಂತಕ್ಕೆ ಸಂಬಂಧಿಸಿದ ಕನಿಷ್ಠ 10 ಟನ್ಗಳಷ್ಟು ವಿಷಕಾರಿ ತ್ಯಾಜ್ಯದ ಪ್ರಾಯೋಗಿಕ ದಹನದ ಮೊದಲ ಹಂತ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪೀತಂಪುರದ ಸೌಲಭ್ಯದಲ್ಲಿ ಸೋಮವಾರ ಅಂತ್ಯಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಯೋಗಿಕ ದಹನದ ಸಂದರ್ಭ ಅನಿಲ ಹೊರ ಸೂಸುವಿಕೆ ಪ್ರಮಾಣಿತ ಮಿತಿಯೊಳಗೆ ಇತ್ತು ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಈಗ ಕಾರ್ಯಾಚರಿಸದ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿರುವ 337 ಟನ್ ವಿಷಕಾರಿ ತ್ಯಾಜ್ಯಗಳಲ್ಲಿ 10 ಟನ್ ಪ್ರಾಯೋಗಿಕ ದಹನ ಶುಕ್ರವಾರ ಅಪರಾಹ್ನ ಆರಂಭವಾಗಿತ್ತು. ತ್ಯಾಜ್ಯದ ಪ್ರಾಯೋಗಿಕ ದಹನದ ಮೊದಲ ಹಂತ ವಿಲೇವಾರಿ ಸೌಲಭ್ಯದಲ್ಲಿ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಇಂದೋರ್ನ ವಿಭಾಗೀಯ ಆಯುಕ್ತ ದೀಪಕ್ ಸಿಂಗ್, ನಾವು ಯೂನಿಯನ್ ಕಾರ್ಬೈಡ್ ಕಾರ್ಖಾನೆಯ 10 ಟನ್ ತ್ಯಾಜ್ಯವನ್ನು ಪೀತಂಪುರದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶುಕ್ರವಾರ ದಹನ ಆರಂಭಿಸಿದ್ದೆವು. ಈ ಪ್ರಕ್ರಿಯೆ ಸೋಮವಾರ ಪೂರ್ಣಗೊಂಡಿತು ಎಂದಿದ್ದಾರೆ.
ನಿರ್ದಿಷ್ಟ ವಿವರಗಳನ್ನು ಬಹಿರಂಗಗೊಳಿಸದ ಅವರು, ಪ್ರಾಯೋಗಿಕ ದಹನದ ಮೊದಲ ಹಂತದಲ್ಲಿ ಅನಿಲ ಹೊರ ಸೂಸುವಿಕೆ ಪ್ರಮಾಣಿತ ಮಿತಿಯಲ್ಲಿ ಇತ್ತು ಎಂದಿದ್ದಾರೆ.





