2024-25ನೇ ಸಾಲಿನಲ್ಲಿ ವಿತ್ತೀಯ ಕೊರತೆ ಶೇ.5.1
ನಿರ್ಮಲಾ ಸೀತಾರಾಮನ್| Photo: PTI
ಹೊಸದಿಲ್ಲಿ : 2024-25ನೇ ಸಾಲಿನ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ)ಯು 5.1 ಶೇಕಡದಷ್ಟಿರುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಮಂಡಿಸಿ ಮಾತನಾಡಿದ ಅವರು, ಮುಂದಿನ ವಿತ್ತೀಯ ವರ್ಷ (2024-25)ದಲ್ಲಿ ದೇಶದ ಒಟ್ಟು ಸಾಲವು 14.13 ಲಕ್ಷ ಕೋಟಿ ಆಗಿರುವುದೆಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ನಿರ್ದಿಷ್ಟ ವಿತ್ತೀಯ ವರ್ಷದಲ್ಲಿ ಸರಕಾರದ ವೆಚ್ಚವು, ಅದಕ್ಕೆ ದೊರೆಯುವ ಆದಾಯಕ್ಕಿಂತ ಅಧಿಕವಾಗಿದ್ದಲ್ಲಿ ಅದನ್ನು ವಿತ್ತೀಯ ಕೊರತೆ ಎಂದು ಪರಿಗಣಿಸಲಾಗುತ್ತದೆ.
ಹಾಲಿ ಆರ್ಥಿಕ ವರ್ಷವಾದ 2023-24ನೇ ಸಾಲಿನಲ್ಲಿ ಭಾರತದ ವಿತ್ತೀಯ ಕೊರತೆಯು ಶೇ.5.8ರಷ್ಟಿರುವುದೆಂದು ಅಂದಾಜಿಸಲಾಗಿದೆ. ಇದು ಹಿಂದಿನ ಬಜೆಟ್ ಅಂದಾಜಿಗಿಂತ ( ಶೇ.5.9) ಸಾಧಾರಣವಾಗಿ ಕಡಿಮೆಯೆಂದು ಅವರು ಹೇಳಿದ್ದಾರೆ.
2025-26ನೇ ವಿತ್ತೀಯ ವರ್ಷದೊಳಗೆ ಶೇ.4.5ರ ವಿತ್ತೀಯ ಕೊರತೆ ಗುರಿಯನ್ನು ತಲುಪಲು ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಈ ನಿಟ್ಟಿನಲ್ಲಿ ದೇಶದ ಆರ್ಥಿಕತೆಯನ್ನು ಬಲಾಢ್ಯಗೊಳಿಸುವ ದಾರಿಯಲ್ಲಿ ಅದು ಸಾಗುತ್ತಿದೆಯೆಂದು ಸೀತಾರಾಮನ್ ಸದನಕ್ಕೆ ತಿಳಿಸಿದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಸಾಲವು 15.4 ಲಕ್ಷ ಕೋಟಿ ರೂಗೆ ತಲುಪುವುದೆಂದು ಕೇಂದ್ರ ಸರಕಾರವು ಅಂದಾಜಿಸಿದೆ.