ಉತ್ತರ ಪ್ರದೇಶ | ದಲಿತ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ; ನಾಲ್ವರು ಆರೋಪಿಗಳ ಬಂಧನ

Photo : indiatoday
ಲಕ್ನೊ, ಅ. 12: ಹದಿನೇಳು ವರ್ಷದ ದಲಿತ ವಿದ್ಯಾರ್ಥಿನಿಯನ್ನು ಐವರು ಅಪರಿಚಿತ ವ್ಯಕ್ತಿಗಳು ಅತ್ಯಾಚಾರ ಎಸಗಿದ ಘಟನೆ ಲಕ್ನೋದ ಬಂತಾರ ಪ್ರದೇಶದಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
11ನೇ ತರಗತಿಯ ದಲಿತ ವಿದ್ಯಾರ್ಥಿನಿ ತನ್ನ ಹಿರಿಯ ಅಕ್ಕನ ಮನೆಗೆ ಭೇಟಿ ನೀಡಲು ರಾತ್ರಿ ಸುಮಾರು 12 ಗಂಟೆಗೆ ಮನೆಯಿಂದ ಹೊರಟಿದ್ದಳು. ಆಕೆ ತನ್ನ ಪರಿಚಿತರೊಬ್ಬರ ಬೈಕ್ ನಲ್ಲಿ ತೆರಳಿದ್ದಳು ಎಂದು ಮೂಲಗಳು ತಿಳಿಸಿವೆ.
‘‘ವಿದ್ಯಾರ್ಥಿನಿ ಹಾಗೂ ಆಕೆಯ ಪರಿಚಯದ ವ್ಯಕ್ತಿ ಮಾತನಾಡಲು ಬಂತಾರ ಪೊಲೀಸ್ ಠಾಣಾ ವ್ಯಾಪ್ತಿಯ ಪೆಟ್ರೋಲ್ ಪಂಪ್ ಸಮೀಪ ಮಾವಿನ ತೋಪಿನಲ್ಲಿ ಬೈಕ್ ನಿಲ್ಲಿಸಿದ್ದಾರೆ. ಈ ಸಂದರ್ಭ ಅಪರಿಚಿತ ವ್ಯಕ್ತಿಗಳು ಅವರಿದ್ದಲ್ಲಿಗೆ ಆಗಮಿಸಿದ್ದಾರೆ. ವಿದ್ಯಾರ್ಥಿನಿಯ ಜೊತೆಗಿದ್ದ ವ್ಯಕ್ತಿಯನ್ನು ಥಳಿಸಿ ಓಡಿಸಿದ್ದಾರೆ. ಅನಂತರ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ’’ ಎಂದು ಕೃಷ್ಣನಗರದ ಪೊಲೀಸ್ ಉಪ ಆಯುಕ್ತ ವಿಕಾಸ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಂದು ಹಾಕಲಾಗುವುದು ಎಂದು ಆರೋಪಿಗಳು ಬೆದರಿಕೆ ಒಡ್ಡಿದ್ದಾರೆ. ಅನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ವಿದ್ಯಾರ್ಥಿನಿ ಈ ಘಟನೆಯನ್ನು ಫೋನ್ ಮೂಲಕ ತನ್ನ ಭಾವನಿಗೆ ತಿಳಿಸಿದ್ದಾಳೆ. ಅನಂತರ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ಹಲವು ತಂಡಗಳನ್ನು ರೂಪಿಸಿದ್ದಾರೆ. ನಾಲ್ವರನ್ನು ಬಂಧಿಸಲಾಗಿದೆ ಎಂದು ವಿಕಾಸ್ ಕುಮಾರ್ ಪಾಂಡೆ ತಿಳಿಸಿದ್ದಾರೆ.







