ದಾರಿತಪ್ಪಿಸುವ ಜಾಹೀರಾತುಗಳ ಕುರಿತ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವನೆಯು ಐದು ವರ್ಷಗಳ ನಂತರವೂ ಹಾಗೆಯೇ ಉಳಿದಿದೆ: ಆರ್ಟಿಐ ನಿಂದ ಬಹಿರಂಗ

ಸಾಂದರ್ಭಿಕ ಚಿತ್ರ | freepik.com
ಹೊಸದಿಲ್ಲಿ: ದಾರಿತಪ್ಪಿಸುವ ಜಾಹೀರಾತುಗಳ ಮೇಲಿನ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವನೆಯು ಐದು ವರ್ಷಗಳ ನಂತರವೂ ಹಾಗೆಯೇ ಉಳಿದಿದೆ ಎಂದು ಆರ್ಟಿಐ ಅರ್ಜಿಯಿಂದ ಬಹಿರಂಗವಾಗಿದೆ ಎಂದು newindianexpress.com ವರದಿ ಮಾಡಿದೆ.
ಅನೇಕ ಔಷಧಿ ಕಂಪೆನಿಗಳು ದಾರಿ ತಪ್ಪಿಸುವ ಜಾಹೀರಾತುಗಳನ್ನು ನೀಡಿ, ಜನರನ್ನು ಸೆಳೆಯುತ್ತಿದ್ದವು. ಈ ರೀತಿಯ ಸುಳ್ಳು ಜಾಹೀರಾತುಗಳಿಂದ ಜನರಿಗೆ ರಕ್ಷಣೆ ನೀಡಲು ಡ್ರಗ್ಸ್ ಆಂಡ್ ಮ್ಯಾಜಿಕ್ ರೆಮೆಡೀಸ್ (ಆಬ್ಜೆಕ್ಟೇಬಲ್ ಅಡ್ವರ್ಟೈಸ್ಮೆಂಟ್) ಆ್ಯಕ್ಟ್ 1954 ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಲಾಗಿತ್ತು.
ಕೇಂದ್ರ ಆರೋಗ್ಯ ಸಚಿವಾಲಯವು ಮೇ 15 ರಂದು ಆರ್ ಟಿ ಐ ಕಾರ್ಯಕರ್ತ ಡಾ. ಕೆ.ವಿ. ಬಾಬು ಸಲ್ಲಿಸಿದ ಆರ್ಟಿಐ ಅರ್ಜಿಗೆ ಪ್ರತಿಕ್ರಿಯೆಯಾಗಿ, “ಲಭ್ಯವಿರುವ ದಾಖಲೆಗಳ ಪ್ರಕಾರ, ಫೈಲ್ ಸಂಖ್ಯೆ A.11035/133/2014-DFQC ನಲ್ಲಿ 09/11/2022 ರ ನಂತರ ಯಾವುದೇ ಬದಲಾವಣೆ ದಾಖಲಾಗಿಲ್ಲ” ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕೇರಳ ಮೂಲದ ನೇತ್ರಶಾಸ್ತ್ರಜ್ಞರಾಗಾರುವ ಡಾ. ಕೆ.ವಿ. ಬಾಬು, “2018 ರಲ್ಲಿ ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಯ ನಂತರ ಕರಡು ಪ್ರಸ್ತಾವನೆಯನ್ನು ಫೆಬ್ರವರಿ 2020 ರಲ್ಲಿ ಸಾರ್ವಜನಿಕರ ಮುಂದೆ ಇಡಲಾಯಿತು. ಕಾಯ್ದೆಯ ಉಲ್ಲಂಘನೆಗೆ ಈ ಹಿಂದೆ ಆರು ತಿಂಗಳಿಂದ ಒಂದು ವರ್ಷದ ವರೆಗೆ ನೀಡಲಾಗುತ್ತಿದ್ದ ಶಿಕ್ಷೆಯನ್ನು ಕಾಯ್ದೆಯ ಶಿಕ್ಷೆಯನ್ನು ಎರಡು ವರ್ಷಗಳಿಂದ ಐದು ವರ್ಷಗಳಿಗೆ ಹೆಚ್ಚಿಸಲಾಯಿತು. ಪ್ರಸ್ತಾವಿತ ತಿದ್ದುಪಡಿಯನ್ನು ಐದು ವರ್ಷಗಳಿಗೂ ಹೆಚ್ಚು ಕಾಲ ಹಾಗೆಯೇ ಇಡಲಾಗಿದೆ. ನವೆಂಬರ್ 2022 ರ ನಂತರ ಈ ಕುರಿತ ಯಾವುದೇ ಬೆಳವಣಿಗೆ ನಡೆದಿಲ್ಲ” ಎಂದು ಅವರು ಹೇಳಿದ್ದಾರೆ.
ಐದು ವರ್ಷಗಳ ಹಿಂದೆ, ಕೇಂದ್ರ ಆರೋಗ್ಯ ಸಚಿವಾಲಯವು ಡ್ರಗ್ಸ್ ಆಂಡ್ ಮ್ಯಾಜಿಕ್ ರೆಮೆಡೀಸ್(ಆಬ್ಜೆಕ್ಟೇಬಲ್ ಅಡ್ವರ್ಟೈಸ್ಮೆಂಟ್) ಆ್ಯಕ್ಟ್ 1954 ಕಾಯ್ದೆಗೆ ತಿದ್ದುಪಡಿ ತರಲು ಗಮನಾರ್ಹ ಬದಲಾವಣೆಗಳನ್ನು ಪ್ರಸ್ತಾಪಿಸಿತ್ತು. ಇದು ಆಯುಷ್ ಔಷಧಿಗಳ ಜಾಹೀರಾತುಗಳು ಸೇರಿದಂತೆ ದಾರಿತಪ್ಪಿಸುವ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಗುರಿಯನ್ನು ಹೊಂದಿತ್ತು.
ನವೆಂಬರ್ 2022 ರ ನಂತರ ಕಾಯ್ದೆಯ ತಿದ್ದುಪಡಿಯ ಕುರಿತಾಗಿ ಯಾವುದೇ ಬೆಳವಣಿಗೆಗಳು ಕಾಣದ ಕಾರಣ ಸಚಿವಾಲಯವು ಪ್ರಸ್ತಾವಿತ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವುದು ಕಾಣುತ್ತಿಲ್ಲ ಎಂದು ಆರ್ಟಿಐ ಬಹಿರಂಗಪಡಿಸಿದೆ.







