ಮಾಸ್ಕೋದಲ್ಲಿ ಡ್ರೋನ್ ದಾಳಿ | ಕನಿಮೋಳಿ ನೇತೃತ್ವದ ಸಂಸದರ ನಿಯೋಗವಿದ್ದ ವಿಮಾನ ಲ್ಯಾಂಡಿಂಗ್ ವಿಳಂಬ

Photo credit: X/@CaptBrijesh
ಹೊಸದಿಲ್ಲಿ: ಡಿಎಂಕೆ ನಾಯಕಿ ಕನಿಮೋಳಿ ನೇತೃತ್ವದ ಭಾರತೀಯ ಸಂಸದರ ನಿಯೋಗ ತೆರಳಿದ ವಿಮಾನ ಮಾಸ್ಕೋದಲ್ಲಿ ಡ್ರೋನ್ ದಾಳಿಯಿಂದಾಗಿ ತಡವಾಗಿ ಲ್ಯಾಂಡಿಂಗ್ ಮಾಡಲಾಗಿದೆ ಎಂದು ವರದಿಯಾಗಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧದ ಹಿನ್ನೆಲೆ ಪರಸ್ಪರ ದಾಳಿ ನಡೆಯುತ್ತಿದೆ. ಇತ್ತೀಚೆಗೆ ಮಾಸ್ಕೋ ಮೇಲೆ ಡ್ರೋನ್ ದಾಳಿಗಳು ಹೆಚ್ಚಾಗಿ ನಡೆಯುತ್ತಿದೆ.
ಮಾಸ್ಕೋ ಮತ್ತು ಇತರ ಪ್ರದೇಶಗಳಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ಸೇವೆಗಳು ಸ್ಥಗಿತಗೊಂಡಿದ್ದವು. ಕನಿಮೋಳಿ ಮತ್ತು ಐವರು ಸಚಿವರು ಇದ್ದ ಸರ್ವಪಕ್ಷ ನಿಯೋಗ ʼಆಪರೇಷನ್ ಸಿಂಧೂರ್ʼ ಮತ್ತು ಭಯೋತ್ಪಾದನೆ ವಿರುದ್ಧದ ಭಾರತದ ಸಂದೇಶವನ್ನು ಜಗತ್ತಿಗೆ ಸಾರಲು ತೆರಳಿತ್ತು.
ಡ್ರೋನ್ ದಾಳಿಯಿಂದಾಗಿ ವಿಮಾನ ಆಕಾಶದಲ್ಲಿ ಸುತ್ತು ಹಾಕಬೇಕಾಯಿತು. 45 ನಿಮಿಷಗಳ ವಿಳಂಬದ ಬಳಿಕ ವಿಮಾನ ಸುರಕ್ಷಿತವಾಗಿ ಇಳಿಯಿತು ಎಂದು ಸಂಸದೆ ಕನಿಮೋಳಿ ಅವರ ಆಪ್ತ ಮೂಲಗಳು ತಿಳಿಸಿದೆ.
ಡೊಮೊಡೆಡೋವೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಕನಿಮೋಳಿ ಮತ್ತು ಅವರ ತಂಡ ಸುರಕ್ಷಿತವಾಗಿ ಇಳಿದ ಬಳಿಕ ಭಾರತೀಯ ರಾಯಭಾರಿ ವಿನಯ್ ಕುಮಾರ್ ಮತ್ತು ಇತರ ಅಧಿಕಾರಿಗಳು ಅವರನ್ನು ಬರಮಾಡಿಕೊಂಡರು.
ಕನಿಮೋಳಿ ನೇತೃತ್ವದದಲ್ಲಿ ನಿಯೋಗದಲ್ಲಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಸಮಾಜವಾದಿ ಪಕ್ಷದ ರಾಜೀವ್ ರೈ, ನ್ಯಾಷನಲ್ ಕಾನ್ಫರೆನ್ಸ್ ಸಂಸದ ಮಿಯಾನ್ ಅಲ್ತಾಫ್ ಅಹ್ಮದ್, ಆರ್ಜೆಡಿ ಪಕ್ಷದ ಪ್ರೇಮ್ ಚಂದ್ ಗುಪ್ತಾ, ಎಎಪಿ ಪಕ್ಷದ ಅಶೋಕ್ ಮಿತ್ತಲ್, ನೇಪಾಳದ ಮಾಜಿ ರಾಯಭಾರಿ ಮಂಜೀವ್ ಪುರಿ ಹಾಗೂ ಫ್ರಾನ್ಸ್ನ ಮಾಜಿ ರಾಯಭಾರಿ ಜಾವೇದ್ ಅಶ್ರಫ್ ಇದ್ದಾರೆ.







