ಮಹಾರಾಷ್ಟ್ರಕ್ಕೆ 1,556.40 ಕೋಟಿ, ಕರ್ನಾಟಕಕ್ಕೆ 384.40 ಕೋಟಿ ರೂಪಾಯಿ ಪ್ರವಾಹ ಪರಿಹಾರ ನಿಧಿ ಬಿಡುಗಡೆ ಮಾಡಿದ ಕೇಂದ್ರ ಸರಕಾರ

Photo: deccanherald
ಹೊಸದಿಲ್ಲಿ: ಈ ವರ್ಷದ ನೈರುತ್ಯ ಮಾನ್ಸೂನ್ ವೇಳೆ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಪೀಡಿತರಾಗಿರುವ ಜನರಿಗೆ ಪರಿಹಾರ ಒದಗಿಸಲು ಕೇಂದ್ರ ಸರಕಾರ ತನ್ನ ಪಾಲಿನ ಪರಿಹಾರದ ಎರಡನೆ ಕಂತಿನಲ್ಲಿ 384.40 ಕೋಟಿ ರೂ. ಮುಂಗಡ ಹಣವನ್ನು ರಾಜ್ಯ ವಿಪತ್ತು ಪರಿಹಾರ ನಿಧಿಗೆ ಬಿಡುಗಡೆ ಮಾಡಿದೆ ಎಂದು ರವಿವಾರ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಗೃಹ ಸಚಿವಾಲಯ, ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಒಟ್ಟು 1,950.80 ಕೋಟಿ ರೂ. ಮುಂಗಡ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನುಮೋದನೆ ನೀಡಿದ್ದಾರೆ ಎಂದು ಹೇಳಿದೆ.
ಈ ವರ್ಷದ ಮಾನ್ಸೂನ್ ಋತುವಿನಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಬಾಧಿತರಾಗಿರುವ ಜನರಿಗೆ ತಕ್ಷಣವೇ ಪರಿಹಾರ ಒದಗಿಸಲು, ಈ ಪರಿಹಾರ ಮೊತ್ತದ ಪೈಕಿ ಮಹಾರಾಷ್ಟ್ರಕ್ಕೆ 1,556.40 ಕೋಟಿ ರೂ. ಹಾಗೂ ಕರ್ನಾಟಕಕ್ಕೆ 384.40 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ಅದು ತಿಳಿಸಿದೆ.
ಪ್ರವಾಹ, ಭೂಕುಸಿತ ಹಾಗೂ ಮೇಘಸ್ಫೋಟಗಳಿಂದ ಬಾಧಿತವಾಗಿರುವ ರಾಜ್ಯಗಳಿಗೆ ಅಗತ್ಯವಿರುವ ಎಲ್ಲ ನೆರವನ್ನು ಒದಗಿಸಲು ಕೇಂದ್ರ ಸರಕಾರ ಸಂಪೂರ್ಣ ಬದ್ಧವಾಗಿದೆ ಎಂದೂ ಈ ಪ್ರಕಟನೆಯಲ್ಲಿ ಹೇಳಲಾಗಿದೆ.





