ಎಷ್ಟು ದಿನ ಉಚಿತವಾಗಿ ನೀಡಬಹುದು?: ಪಡಿತರ ಕುರಿತು ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಪ್ರಶ್ನೆ

Photo | PTI
ಹೊಸದಿಲ್ಲಿ: ಉಚಿತವಾಗಿ ಎಷ್ಟು ದಿನ ನೀಡಬಹುದು? ಉದ್ಯೋಗವನ್ನು ಯಾಕೆ ಸೃಷ್ಟಿಸಲಾಗುತ್ತಿಲ್ಲ ಎಂದು ಉಚಿತ ಪಡಿತರ ಕುರಿತು ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 81 ಕೋಟಿ ಜನರಿಗೆ ಉಚಿತ ಅಥವಾ ಸಬ್ಸಿಡಿ ಪಡಿತರವನ್ನು ನೀಡಲಾಗುತ್ತಿದೆ ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿದಾಗ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರ ಪೀಠ ಈ ಪ್ರಶ್ನೆಯನ್ನು ಕೇಳಿದೆ. ಇದರರ್ಥ ತೆರಿಗೆ ಪಾವತಿದಾರರು ಮಾತ್ರ ಹೊರಗುಳಿದಿದ್ದಾರೆ ಎಂದು ಪೀಠವು ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರಿಗೆ ತಿಳಿಸಿದೆ.
ಎನ್ ಜಿಒ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ʼಇ-ಶ್ರಮ್" ಪೋರ್ಟಲ್ ನಲ್ಲಿ ನೋಂದಾಯಿಸಿದ ಎಲ್ಲಾ ವಲಸೆ ಕಾರ್ಮಿಕರಿಗೆ ಉಚಿತ ಪಡಿತರ ನೀಡಲು ನಿರ್ದೇಶನಗಳನ್ನು ನೀಡಬೇಕಾಗಿದೆ ಎಂದು ಹೇಳಿದ್ದಾರೆ.
ಈ ವೇಳೆ ಪೀಠವು, ಎಷ್ಟು ಸಮಯದವರೆಗೆ ಉಚಿತಗಳನ್ನು ನೀಡಬಹುದು? ಈ ವಲಸೆ ಕಾರ್ಮಿಕರಿಗೆ ಉದ್ಯೋಗಾವಕಾಶಗಳು, ಉದ್ಯೋಗ ಮತ್ತು ಸಾಮರ್ಥ್ಯ ವರ್ಧನೆಗಾಗಿ ನಾವು ಏಕೆ ಕೆಲಸ ಮಾಡಬಾರದು? ಎಂದು ಪ್ರಶ್ನಿಸಿದೆ.
ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ನೀಡುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ನ್ಯಾಯಾಲಯವು ಕಾಲಕಾಲಕ್ಕೆ ನಿರ್ದೇಶನಗಳನ್ನು ನೀಡಿದೆ, ಇದರಿಂದ ಅವರು ಕೇಂದ್ರವು ನೀಡುವ ಉಚಿತ ಪಡಿತರವನ್ನು ಪಡೆಯಬಹುದು. ಇತ್ತೀಚಿನ ಆದೇಶವು ಪಡಿತರ ಚೀಟಿ ಹೊಂದಿಲ್ಲದ ಆದರೆ, "ಇ-ಶ್ರಮ್" ಪೋರ್ಟಲ್ ಅಡಿಯಲ್ಲಿ ನೋಂದಾಯಿಸಲ್ಪಟ್ಟಿರುವವರಿಗೂ ಕೇಂದ್ರದಿಂದ ಉಚಿತ ಪಡಿತರವನ್ನು ನೀಡಬೇಕೆಂದು ಹೇಳುತ್ತದೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.







