ಹೈದರಾಬಾದ್ | ಹಿರಿಯ ವಿದ್ಯಾರ್ಥಿಗಳಿಂದ ಕಿರುಕುಳ ಆರೋಪ; ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಜಾದವ್ ಸಾಯಿ ತೇಜ (Photo: NDTV)
ಹೈದರಾಬಾದ್ : ತೆಲಂಗಾಣದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕಾಲೇಜು ಹಾಸ್ಟೆಲ್ನಲ್ಲಿ ರ್ಯಾಗಿಂಗ್ ಮತ್ತು ಕಿರುಕುಳ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಾದವ್ ಸಾಯಿ ತೇಜ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಹೈದರಾಬಾದ್ನ ಸಿದ್ಧಾರ್ಥ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಜಾದವ್ ಸಾಯಿ ತೇಜ (22) ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಜಾದವ್ ಸಾಯಿ ತೇಜ ತನ್ನ ಕೊನೆಯ ವೀಡಿಯೊದಲ್ಲಿ ನನ್ನನ್ನು ಥಳಿಸಿ ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾನೆ. ಪೊಲೀಸರು ರ್ಯಾಗಿಂಗ್ ಮತ್ತು ಆತ್ಮಹತ್ಯೆ ಬಗ್ಗೆಯೂ ತನಿಖೆ ಮಾಡುತ್ತಿದ್ದಾರೆ.
"ಸಾಯಿ ತೇಜ ಅವರನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಬಾರ್ಗೆ ಕರೆದೊಯ್ದು ಮದ್ಯ ಸೇವಿಸಿ ಸುಮಾರು 10,000 ರೂ. ಬಿಲ್ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಇದರಿಂದ ಒತ್ತಡಕ್ಕೊಳಗಾಗಿದ್ದ ಸಾಯಿ ತೇಜ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ಅವರ ವಕೀಲ ಕಿಶೋರ್ ಆರೋಪಿಸಿದ್ದಾರೆ.
"ನಾನು ಕಾಲೇಜಿಗೆ ಹೋಗುತ್ತಿದ್ದೆ, ನಾಲ್ಕೈದು ಜನರು ಬಂದು ನನ್ನನ್ನು ಥಳಿಸಿ, ಬೆದರಿಸಿ ಹಣ ಕೇಳಿದರು" ಎಂದು ಸಾಯಿ ತೇಜ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.







