ʼವಾಂಟೆಡ್ʼ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಫೋಟೋ ಇರುವ ಪೋಸ್ಟರ್ ಹಾಕಿದ ವಿದೇಶಿ ರಾಯಭಾರಿ ಕಚೇರಿ ಸಿಬ್ಬಂದಿ
ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದ ದಿಲ್ಲಿ ಪೊಲೀಸರು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (PTI)
ಹೊಸದಿಲ್ಲಿ : ದಿಲ್ಲಿಯಲ್ಲಿರುವ ಪಶ್ಚಿಮ ಯುರೋಪಿಯನ್ ದೇಶದ ರಾಯಭಾರಿ ಕಚೇರಿಯ ಸಿಬ್ಬಂದಿಯೋರ್ವರು ರಾಷ್ಟ್ರ ರಾಜಧಾನಿಯ ಚಾಣಕ್ಯಪುರಿ ಪ್ರದೇಶದಲ್ಲಿ ʼವಾಂಟೆಡ್ʼ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಫೋಟೋ ಇರುವ ಪೋಸ್ಟರ್ ಹಾಕಿದ್ದಾರೆ.
ಈ ಕುರಿತು ದಿಲ್ಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ ಎಂದು The Indian Express ವರದಿ ಮಾಡಿದೆ.
ಮೇ 29ರಂದು ʼಮಲ್ಚಾ ಮಾರ್ಗದ ಕಾರ್ಮೆಲ್ ಕಾನ್ವೆಂಟ್ ಶಾಲೆʼ ಮತ್ತು ʼಅಮೆರಿಕನ್ ಎಂಬೆಸ್ಸಿ ಶಾಲೆʼಯ ಬಳಿ ವಿದ್ಯುತ್ ಕಂಬಗಳಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಪೋಸ್ಟರ್ ನೋಡಿದೆವು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಪೋಸ್ಟರ್ಗಳನ್ನು ತೆಗೆದುಹಾಕಲಾಗಿದೆ ಎಂದು ಚಾಣಕ್ಯಪುರಿ ಠಾಣೆ ಪೊಲೀಸರು ಹೇಳಿದ್ದಾರೆ.
ʼಪೋಸ್ಟರ್ ಹಾಕಿರುವವರನ್ನು ಗುರುತಿಸಲು ಈ ಪ್ರದೇಶದಲ್ಲಿರುವ ಎಲ್ಲಾ ಸಿಸಿಟಿವಿ ಕ್ಯಾಮೆರಗಳನ್ನು ಪರಿಶೀಲಿಸಲಾಗಿದೆ. ಸುಮಾರು 50 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಬೆಳಿಗ್ಗೆ 5.30ರ ಸುಮಾರಿಗೆ ನೀಲಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ ವ್ಯಕ್ತಿಯೊಬ್ಬರು ಸೈಕಲ್ನಲ್ಲಿ ಬಂದು ವಿದ್ಯುತ್ ಕಂಬದ ಮೇಲೆ ಪೋಸ್ಟರ್ ಹಾಕಿರುವುದು ಕಂಡು ಬಂದಿದೆ. ಹೆಚ್ಚಿನ ತನಿಖೆ ನಡೆಸಿದಾಗ ಪೋಸ್ಟರ್ ಹಾಕಿರುವ ವ್ಯಕ್ತಿ ಪಶ್ಚಿಮ ಯುರೋಪಿಯನ್ ರಾಷ್ಟ್ರದ ರಾಯಭಾರಿ ಕಚೇರಿಯ ಸಿಬ್ಬಂದಿ ಎನ್ನುವುದು ತಿಳಿದು ಬಂದಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆʼ ಎಂದು ಪೊಲೀಸರು ತಿಳಿಸಿದ್ದಾರೆ.







