ʼಆಪರೇಷನ್ ಸಿಂಧೂರ್ʼ ಕುರಿತು ಸಂಸದೀಯ ಸಮಿತಿಗೆ ವಿವರಣೆ ನೀಡಲಿರುವ ವಿದೇಶಾಂಗ ಕಾರ್ಯದರ್ಶಿ

ವಿಕ್ರಮ್ ಮಿಸ್ರಿ (PTI)
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಭಾರತ-ಪಾಕಿಸ್ತಾನ ಮಿಲಿಟರಿ ಸಂಘರ್ಷ, ಆಪರೇಷನ್ ಸಿಂಧೂರ್ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸೋಮವಾರ ಸಂಸದೀಯ ಸಮಿತಿಗೆ ವಿವರಣೆ ನೀಡಲಿದ್ದಾರೆ.
ಸಂಜೆ 4 ಗಂಟೆ ಸುಮಾರಿಗೆ ಈ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಆಪರೇಷನ್ ಸಿಂಧೂರ್ ಮತ್ತು ನಂತರದ ಎರಡು ದೇಶಗಳ ನಡುವಿನ ಮಿಲಿಟರಿ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಈ ಸಭೆ ನಡೆಯಲಿದೆ.
ಮೇ 10 ರಂದು ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಬಗ್ಗೆ ಭಾರತ ಮತ್ತು ಪಾಕಿಸ್ತಾನವು ಕದನ ವಿರಾಮ ಒಪ್ಪಂದಕ್ಕೆ ಬಂದವು.
ಸೋಮವಾರ ಮತ್ತು ಮಂಗಳವಾರ ಕಾಂಗ್ರೆಸ್ ಸಂಸದ ಶಶಿ ತರೂರ್ ಅಧ್ಯಕ್ಷತೆಯ ಸಮಿತಿಗೆ ಮಿಸ್ರಿ ಅವರು "ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ಪ್ರಸ್ತುತ ವಿದೇಶಾಂಗ ನೀತಿ ಬೆಳವಣಿಗೆಗಳ" ಕುರಿತು ವಿವರಿಸಲಿದ್ದಾರೆ.
ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ಭಯೋತ್ಪಾದನೆಯನ್ನು ಎದುರಿಸುವ ಭಾರತದ ದೃಢಸಂಕಲ್ಪದ ಬಗ್ಗೆ ಜಾಗತಿಕ ನಾಯಕರಿಗೆ ವಿವರಿಸಲು ಸರ್ಕಾರವು ವಿಶ್ವದ 33 ರಾಜಧಾನಿಗಳಿಗೆ ಸರ್ವಪಕ್ಷ ನಿಯೋಗಗಳನ್ನು ಕಳುಹಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಈ ಸಭೆಯು ಮಹತ್ವ ಪಡೆದುಕೊಂಡಿದೆ.







