ವನ್ಯಜೀವಿಗಳ ಗೋಪ್ಯ ಮಾಹಿತಿಗಳು ವಾಟ್ಸ್ ಆ್ಯಪ್ ನಲ್ಲಿ ಸೋರಿಕೆ : ಮುಜುಗರಕ್ಕೀಡಾದ ಮಧ್ಯಪ್ರದೇಶ ಅರಣ್ಯ ಇಲಾಖೆ
ಅರಣ್ಯ ಇಲಾಖೆಯಲ್ಲಿರುವ ನೌಕರರ ಅತೀ ಉತ್ಸಾಹಕ್ಕೆ ಬಲಿಯಾಗುತ್ತಿರುವ ವನ್ಯಜೀವಿಗಳು!
ಭೋಪಾಲ್: ಮಧ್ಯಪ್ರದೇಶ ಅರಣ್ಯ ಇಲಾಖೆ ಈಗಾಗಲೇ ಆನೆಗಳು, ಚೀತಾಗಳು, ಹುಲಿಗಳು ಹಾಗೂ ಇನ್ನಿತರ ವನ್ಯಜೀವಿಗಳನ್ನು ನಿಭಾಯಿಸುವ ಸಂಕೀರ್ಣ ಸವಾಲಿನಿಂದ ಹೈರಾಣಾಗಿದ್ದು, ಇದರೊಂದಿಗೆ, ವನ್ಯಜೀವಿಗಳ ಚಲನವಲನ, ವೈಯಕ್ತಿಕ ವಿವರಗಳ ಗೋಪ್ಯ ಮಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗುತ್ತಿರುವುದರಿಂದ ಮತ್ತಷ್ಟು ಮುಜುಗರಕ್ಕೀಡಾಗಿದೆ.
ವನ್ಯಜೀವಿಗಳ ಊಹಿಸಲಾಗದ ಸ್ವಭಾವಗಳನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ಅರಣ್ಯ ಇಲಾಖೆಗೆ ವಹಿಸಲಾಗಿದ್ದು, ಇದರೊಂದಿಗೆ ತೀವ್ರ ಚಂಚಲ ಪ್ರಪಂಚವಾದ ವಾಟ್ಸ್ ಆ್ಯಪ್ ಗುಂಪುಗಳ ಮೇಲೂ ಕಣ್ಣಿಡಬೇಕಾದ ಒತ್ತಡಕ್ಕೆ ಅರಣ್ಯ ಇಲಾಖೆ ಗುರಿಯಾಗಿದೆ. ಮರಣೋತ್ತರ ಪರೀಕ್ಷಾ ವರದಿಗಳು, ತನಿಖಾ ವಿವರಗಳು, ವನ್ಯಜೀವಿಗಳ ಚಲನವಲನಗಳ ಮಾಹಿತಿ ಸೇರಿದಂತೆ ಇಲಾಖೆಯ ಸೂಕ್ಷ್ಮ ದಾಖಲೆಗಳು ಸಾರ್ವಜನಿಕಗೊಳ್ಳತೊಡಗಿವೆ. ಇದಕ್ಕೆ ಇಲಾಖೆಯಲ್ಲಿರುವ ಅತಿ ಉತ್ಸಾಹಭರಿತ ನೌಕರರು ಕಾರಣ ಎನ್ನಲಾಗಿದೆ!
ಕುತೂಹಲಕರ ಸಂಗತಿಯೆಂದರೆ, ತಮ್ಮ ವರ್ಗಾವಣೆಗೂ ಒಂದು ದಿನ ಮುಂಚೆ ಇಂತಹ ಸೋರಿಕೆಯನ್ನು ತಡೆಗಟ್ಟಲು ಕಠಿಣ ಶಬ್ದಗಳನ್ನೊಳಗೊಂಡ ನಿರ್ದೇಶನ ನೀಡಿದ್ದ ವನ್ಯಜೀವಿ ವಾರ್ಡನ್ ವಿ.ಎನ್.ಅಂಬಾಡೆಯವರ ಪತ್ರ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗಿದೆ.
ಇಲಾಖೆಯ ಗೋಪ್ಯ ಸಂವಹನವಾಗಿ ಉಳಿಯಬೇಕಿದ್ದ ಸೋರಿಕೆಯಾಗಿರುವ ಪತ್ರವು, ಅನಧಿಕೃತ ದಾಖಲೆಗಳ ಸೋರಿಕೆಯಲ್ಲಿ ಆಗುತ್ತಿರುವ ಏರಿಕೆ ಕುರಿತು ಅಂಬಾಡೆ ವ್ಯಕ್ತಪಡಿಸಿರುವ ಕಳವಳದ ಭಾಗವಾಗಿದೆ. ಈ ಮಹತ್ವದ ದಾಖಲೆಗಳು ಭೋಪಾಲ್ ಅರಣ್ಯ ವೃತ್ತದಿಂದ ಕಳವಾಗಿದ್ದ ಹುಲಿಯ ಮರಣೋತ್ತರ ಪರೀಕ್ಷಾ ವರದಿ ಹಾಗೂ ಬಾಂಧವ್ ಗಢ್ ಹುಲಿ ಸಂರಕ್ಷಿತಾರಣ್ಯದಲ್ಲಿ ಸಾವನ್ನಪ್ಪಿದ್ದ ಆನೆಗಳಿಗೆ ಸಂಬಂಧಿಸಿದ ವರದಿಗಳಾಗಿವೆ. ಈ ಪತ್ರವನ್ನು ವನ್ಯಜೀವಿಗಳ ನಿರ್ವಹಣೆಯಲ್ಲಿ ಭಾಗಿಯಾಗಿರುವ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಇನ್ನಿತರ ಸಿಬ್ಬಂದಿಗಳಿಗೆ ಎಚ್ಚರಿಕೆಯನ್ನಾಗಿ ರವಾನಿಸಲಾಗಿತ್ತು ಹಾಗೂ ಸೂಕ್ತ ಅನುಮತಿ ಇಲ್ಲದೆ ಇಂತಹ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳುವುದರಿಂದ ದೂರ ಉಳಿಯಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿತ್ತು.
ಈ ವಾಟ್ಸ್ ಆ್ಯಪ್ ಗುಂಪುಗಳ ಪೈಕಿ ಕೆಲವು ಗುಂಪುಗಳಲ್ಲಿ ಸರಕಾರೇತರ ಸಂಸ್ಥೆಗಳ ಸದಸ್ಯರು ಹಾಗೂ ಭದ್ರತಾ ಸಿಬ್ಬಂದಿಗಳನ್ನು ಸೇರ್ಪಡೆ ಮಾಡಿದ್ದುದರಿಂದ ಪರಿಸ್ಥಿತಿ ಮತ್ತಷ್ಟು ಆತಂಕಕಾರಿ ಸ್ವರೂಪಕ್ಕೆ ತಿರುಗಿದೆ. ಇಂತಹ ಸೂಕ್ಷ್ಮ ಮಾಹಿತಿಗಳನ್ನು ನಿರ್ಲಕ್ಷ್ಯ ಅಥವಾ ದುರುದ್ದೇಶದಿಂದ ಹಂಚಿಕೊಳ್ಳುವುದರಿಂದ, ಈ ಮಾಹಿತಿಗಳು ದುಷ್ಟರ ಕೈ ಸೇರುತ್ತಿವೆ ಎಂದೂ ಅಂಬಾಡೆ ತಮ್ಮ ಪತ್ರದಲ್ಲಿ ಒತ್ತಿ ಹೇಳಿದ್ದರು.
ಇಲಾಖೆಯ ಆಂತರಿಕ ದಾಖಲೆಗಳಿಗೆ ಪ್ರವೇಶಿಸಲು ಮಾನ್ಯತೆ ಇಲ್ಲದ ಸರಕಾರೇತರ ಸಂಸ್ಥೆಗಳು ಹಾಗೂ ಭದ್ರತಾ ಸಿಬ್ಬಂದಿಗಳನ್ನು ಇಂತಹ ಗುಂಪುಗಳಲ್ಲಿ ಸೇರ್ಪಡೆ ಮಾಡಿರುವುದರಿಂದ ಗಮನಾರ್ಹ ಭದ್ರತಾ ಅಪಾಯ ತಲೆದೋರಿದೆ ಎನ್ನಲಾಗಿದೆ.
ಇದೀಗ ತನ್ನ ಶಿಷ್ಟಾಚಾರಗಳನ್ನು ಮತ್ತಷ್ಟು ಬಿಗಿಗೊಳಿಸಲು ಹೆಚ್ಚುವರಿ ಕ್ರಮ ಕೈಗೆತ್ತಿಕೊಂಡಿರುವ ಅರಣ್ಯ ಇಲಾಖೆಯು, ಮುಂದಿನ ಸೋರಿಕೆಯು ಅನಧಿಕೃತ ವ್ಯಕ್ತಿಗಳ ಸಾಮಾಜಿಕ ಮಾಧ್ಯಮಗಳಿಗೆ ಹಂಚಿಕೆಯಾಗುವ ಬದಲು ಅರಣ್ಯದ ನೈಸರ್ಗಿಕ ಜಲ ಮೂಲಗಳಿಗೆ ಸೀಮಿತವಾಗಿರುವುದನ್ನು ಖಾತರಿ ಪಡಿಸಲು ಮುಂದಾಗಿದೆ.