ಮೆತೈ ಮುಸ್ಲಿಮರ ಹತ್ಯೆ ತನಿಖೆಗೆ ವಿಶೇಷ ತನಿಖಾ ತಂಡ ರಚನೆ
ಇಂಫಾಲ: ತೌಬಲ್ ಜಿಲ್ಲೆಯ ಲಿಲೊಂಗ್ ಪಟ್ಟಣದಲ್ಲಿ ನಡೆದ ಮೆತೈ ಮುಸ್ಲಿಮರ ಹತ್ಯೆ ಬಗ್ಗೆ ತನಿಖೆ ನಡೆಸಲು ಮಣಿಪುರ ಪೊಲೀಸರು ಮಂಗಳವಾರ ಐವರು ಸದಸ್ಯರ ವಿಶೇಷ ತನಿಖಾ ತಂಡವೊಂದನ್ನು ರಚಿಸಿದ್ದಾರೆ.
ಶಸ್ತ್ರಧಾರಿ ಬಂಡುಕೋರರು ಸೋಮವಾರ ಮೆತೈ ಪಂಗಾಲ್ ಸಮುದಾಯ (ಮೆತೈ ಮುಸ್ಲಿಮರು)ಕ್ಕೆ ಸೇರಿದ ನಾಲ್ವರನ್ನು ಗುಂಡು ಹಾರಿಸಿ ಕೊಂದಿದ್ದರು. ದಾಳಿಯಲ್ಲಿ ಮೂವರು ಅಪ್ರಾಪ್ತ ವಯಸ್ಕರು ಸೇರಿದಂತೆ 10 ಮೆತೈ ಮುಸ್ಲಿಮರು ಗಾಯಗೊಂಡಿದ್ದರು. ಓರ್ವ ಗಾಯಾಳು ಮೌಲಾನಾ ಅಬ್ದುರ್ರಝಾಕ್ ಬುಧವಾರ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ ಐದಕ್ಕೇರಿದೆ.
ಆಕ್ರಮಣಕಾರರು ರಾಜ್ಯದ ಬಹುಸಂಖ್ಯಾತ ಮೆತೈ ಸಮುದಾಯಕ್ಕೆ ಸೇರಿದವರೆನ್ನಲಾಗಿದೆ.
ಮಣಿಪುರದ ಜನಸಂಖ್ಯೆಯ ಸುಮಾರು 8 ಶೇಕಡದಷ್ಟಿರುವ ಪಂಗಾಲ್ ಸಮುದಾಯದ ಸದಸ್ಯರು ಇಂಫಾಲ ಕಣಿವೆಯ ಸುತ್ತಮುತ್ತ ವಾಸಿಸುತ್ತಿದ್ದಾರೆ. ರಾಜ್ಯದಲ್ಲಿ ಮೆತೈ ಮತ್ತು ಕುಕಿ ಸಮುದಾಯಗಳ ನಡುವೆ ಮೇ ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಪಂಗಾಲ್ ಸಮುದಾಯದ ಸದಸ್ಯರು ತಟಸ್ಥರಾಗಿ ಉಳಿದಿದ್ದಾರೆ.
ಹತ್ಯೆಯ ಬಳಿಕ, ತೌಬಲ್ ನಿವಾಸಿಗಳು ಮೂರು ವಾಹನಗಳಿಗೆ ಬೆಂಕಿ ಕೊಟ್ಟಿದ್ದರು. ಕಣಿವೆ ಜಿಲ್ಲೆಗಳಾದ ತೌಬಲ್, ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ಕಕ್ಚಿಂಗ್ ಮತ್ತು ಬಿಷ್ಣುಪುರಗಳಲ್ಲಿ ಕರ್ಫ್ಯೂವನ್ನು ಮರುಹೇರಲಾಗಿದೆ.