ಯುದ್ಧವೆಂದರೆ ಪ್ರಣಯ, ಬಾಲಿವುಡ್ ಸಿನೆಮಾ ಅಲ್ಲ: ಸೇನೆಯ ಮಾಜಿ ವರಿಷ್ಠ ಮನೋಜ್ ನರವಣೆ

ಮನೋಜ್ ನರವಣೆ | PC : NDTV
ಪುಣೆ: ಯುದ್ಧವೆಂದರೆ ಪ್ರಣಯವಾಗಲಿ, ಬಾಲಿವುಡ್ ಸಿನೆಮಾವಾಗಲಿ ಅಲ್ಲ ಎಂದು ಭಾರತೀಯ ಸೇನೆಯ ಮಾಜಿ ವರಿಷ್ಠ ಮನೋಜ್ ನರವಣೆ ಅವರು ಸೋಮವಾರ ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಿಸಿರುವುದನ್ನು ಟೀಕಿಸುತ್ತಿರುವವರನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಪುಣೆಯಲ್ಲಿ ರವಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆದೇಶಿಸಿದ್ದರೆ ನಾನು ಯುದ್ಧಕ್ಕೆ ಹೋಗುತ್ತಿದ್ದೆ. ಆದರೆ, ರಾಜತಾಂತ್ರಿಕತೆ ಮಾರ್ಗ ತನ್ನ ಮೊದಲ ಆಯ್ಕೆ ಎಂದಿದ್ದಾರೆ.
ಈ ವಾರ ಬಹಳ ಪ್ರಕ್ಷುಬ್ದವಾಗಿತ್ತು. ಇದು ಆಪರೇಷನ್ ಸಿಂಧೂರ್ನೊಂದಿಗೆ ಆರಂಭವಾಯಿತು. ಭಾರತೀಯ ಶಸಸ್ತ್ರ ಪಡೆಗಳು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದವು. ಅನಂತರ ನಾಲ್ಕು ದಿನಗಳ ಕಾಲ ತೀವ್ರ ವೈಮಾನಿಕ ಹಾಗೂ ಕೆಲವು ಭೂ ಯುದ್ಧಗಳು ನಡೆದವು ಎಂದು ಅವರು ಗಮನ ಸೆಳೆದಿದ್ದಾರೆ.
ಇದು ಸೇನಾ ಕಾರ್ಯಾಚರಣೆಯ ನಿಲುಗಡೆಗೆ ಸಂಬಂಧಿಸಿದ ಘೋಷಣೆಯೊಂದಿಗೆ ಅಂತ್ಯಗೊಂಡಿತು. ಇದು ಕೇವಲ ಸೇನಾ ಕಾರ್ಯಾಚರಣೆಯ ನಿಲುಗಡೆ ಮಾತ್ರ. ಇದು ಕದನ ವಿರಾಮವಲ್ಲ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡೋಣ ಎಂದು ಅವರು ಹೇಳಿದ್ದಾರೆ.
ಕದನ ವಿರಾಮದ ಬಗ್ಗೆ ಹಲವರು ಪ್ರಶ್ನಿಸಿರುವುದನ್ನು ನಾನು ಗಮನಿಸಿದೆ. ಸತ್ಯ ಹಾಗೂ ಸಂಖ್ಯೆಗಳ ಬಗ್ಗೆ ಯೋಚಿಸಿ. ಮುಖ್ಯವಾಗಿ ಯುದ್ಧದ ವೆಚ್ಚ ಎಷ್ಟು ಎಂದು ಅಂದಾಜಿಸಿ. ಆಗ ನಿಮಗೆ ಒಂದು ವಿಷಯ ಅರ್ಥವಾಗುತ್ತದೆ. ಬುದ್ಧಿವಂತನಾದ ವ್ಯಕ್ತಿ ತುಂಬಾ ದೊಡ್ಡ ಪ್ರಮಾಣದ ನಷ್ಟವಾಗುವ ಮುನ್ನವೇ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂದು ಅವರು ಹೇಳಿದ್ದಾರೆ.
‘‘ಇಲ್ಲಿ ಮೂರನೇ ಅಂಶವಿದೆ. ಅದು ಸಾಮಾಜಿಕ ಅಂಶ. ನಾನು ಸಾಮರ್ಥ್ಯ ಹಾಗೂ ಧ್ವಂಸದ ಕುರಿತು ಉಲ್ಲೇಖಿಸಿದ್ದೇನೆ. ಆದರೆ, ಸಾಮಾಜಿಕ ಅಂಶವನ್ನು ಉಲ್ಲೇಖಿಸಿಲ್ಲ. ಈ ಸಾಮಾಜಿಕ ಅಂಶ ಕಳೆದುಕೊಂಡ ಜೀವಗಳನ್ನು ಒಳಗೊಂಡಿದೆ. ಗಡಿ ಪ್ರದೇಶದಲ್ಲಿ ಶೆಲ್ ದಾಳಿಯಿಂದ ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡರು ಅಥವಾ ಅವರೇ ಸ್ವತಃ ಹತ್ಯೆಗೀಡಾದರು’’ ಎಂದು ನರವಣೆ ಹೇಳಿದ್ದಾರೆ.







