ಭಾರತದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಅಮೆರಿಕದ ನಿಧಿ: ವರದಿಗಳನ್ನು ಖಂಡಿಸಿದ ಮಾಜಿ ಸಿಇಸಿ ಎಸ್. ವೈ. ಕುರೈಷಿ

ಎಸ್.ವೈ. ಕುರೈಷಿ (PTI)
ಹೊಸದಿಲ್ಲಿ: ತಾನು ಚುನಾವಣಾ ಆಯೋಗದ ಮುಖ್ಯಸ್ಥನಾಗಿದ್ದಾಗ ಭಾರತದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಅಮೆರಿಕನ್ ಏಜೆನ್ಸಿಯ ನಿಧಿಯನ್ನು ಬಳಸಿಕೊಳ್ಳಲಾಗಿತ್ತು ಎಂಬ ವರದಿಯನ್ನು ಮಾಜಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಎಸ್.ವೈ. ಕುರೈಷಿ ಅವರು ತಿರಸ್ಕರಿಸಿದ್ದಾರೆ.
ಬಿಲಿಯಾಧೀಶ ಎಲಾನ್ ಮಸ್ಕ್ ನೇತೃತ್ವದ ಅಮೆರಿಕದ ಸರಕಾರಿ ಕಾರ್ಯದಕ್ಷತೆ ಇಲಾಖೆ (DOGE)ಯು ‘ಭಾರತದಲ್ಲಿ ಮತದಾನ’ಕ್ಕಾಗಿ ನೀಡಲು ಉದ್ದೇಶಿಸಿದ್ದ 21 ಮಿಲಿಯನ್ ಡಾಲರ್ ರದ್ದತಿ ಸೇರಿದಂತೆ ಸರಣಿ ವೆಚ್ಚ ಕಡಿತಗಳನ್ನು ರವಿವಾರ ಘೋಷಿಸಿದ ಬೆನ್ನಲ್ಲೇ ಕುರೈಷಿಯವರ ಪ್ರತಿಕ್ರಿಯೆ ಹೊರಬಿದ್ದಿದೆ.
ಅಧಿಕೃತ DOGE ಹ್ಯಾಂಡಲ್ನಲ್ಲಿ ಹಂಚಿಕೊಳ್ಳಲಾಗಿರುವ ಎಕ್ಸ್ ಪೋಸ್ಟ್ನಲ್ಲಿ ‘ಅಮೆರಿಕದ ತೆರಿಗೆದಾರರ ಡಾಲರ್ ಗಳು ಈ ಕೆಳಗಿನ ಬಾಬ್ತುಗಳಿಗೆ ಖರ್ಚಾಗುತ್ತಿತ್ತು,ಅವೆಲ್ಲವನ್ನೂ ರದ್ದುಗೊಳಿಸಲಾಗಿದೆ ಎಂದು ತಿಳಿಸಲಾಗಿದ್ದು,ಇಂತಹ ಬಾಬ್ತುಗಳ ಪಟ್ಟಿಯನ್ನೂ ಪ್ರಕಟಿಸಲಾಗಿದೆ.
ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು 21 ಮಿಲಿಯನ್ ಡಾಲರ್ ಸೇರಿದಂತೆ ಚುನಾವಣೆಗಳು ಮತ್ತು ರಾಜಕೀಯ ಪ್ರಕ್ರಿಯೆ ಬಲವರ್ಧನೆ ಒಕ್ಕೂಟಕ್ಕೆ 486 ಮಿಲಿಯನ್ ಡಾಲರ್ ಅನುದಾನದ ಕಾರ್ಯಕ್ರಮಗಳನ್ನು ಈ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
‘2012ರಲ್ಲಿ ನಾನು ಸಿಇಸಿ ಆಗಿದ್ದಾಗ ಭಾರತದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಅಮೆರಿಕದ ಏಜೆನ್ಸಿಯಿಂದ ಕೆಲ ಮಿಲಿಯನ್ ಡಾಲರ್ಗಳ ನಿಧಿಯನ್ನು ಪಡೆದುಕೊಳ್ಳಲು ಚುನಾವಣಾ ಆಯೋಗವು ಒಪ್ಪಂದವೊಂದನ್ನು ಮಾಡಿಕೊಂಡಿತ್ತು ಎಂಬ ಮಾಧ್ಯಮಗಳ ಒಂದು ವಿಭಾಗದ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ’ ಎಂದು ಕುರೈಷಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಾಸ್ತವದಲ್ಲಿ ೨೦೧೨ರಲ್ಲಿ ತಾನು ಸಿಇಸಿ ಆಗಿದ್ದಾಗ ಚುನಾವಣಾ ಆಯೋಗದ ತರಬೇತಿ ಮತ್ತು ಸಂಪನ್ಮೂಲ ಕೇಂದ್ರ ‘ಇಂಡಿಯಾ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡೆಮಾಕ್ರಸಿ ಆ್ಯಂಡ್ ಇಲೆಕ್ಷನ್ ಮ್ಯಾನೇಜ್ಮೆಂಟ್(ಐಐಐಡಿಇಎಂ)’ನಲ್ಲಿ ಅಪೇಕ್ಷಿತ ದೇಶಗಳಿಗೆ ತರಬೇತಿ ನೀಡಲು ಇತರ ಹಲವು ಸಂಸ್ಥೆಗಳು ಮತ್ತು ಚುನಾವಣಾ ನಿರ್ವಹಣೆ ಸಂಸ್ಥೆಗಳೊಂದಿಗೆ ಆಯೋಗವು ಹೊಂದಿದ್ದ ಒಪ್ಪಂದಗಳಂತೆ ‘ಇಂಟರ್ನ್ಯಾಷನಲ್ ಫೌಂಡೇಷನ್ ಫಾರ್ ಇಲೆಕ್ಟೋರಲ್ ಸಿಸ್ಟಮ್ಸ್ (ಐಎಫ್ಇಎಸ್)’ ಜೊತೆಯೂ ಒಪ್ಪಂದವೊಂದಿತ್ತು. ಈ ಒಪ್ಪಂದದಲ್ಲಿ ಯಾವುದೇ ಹಣಕಾಸಿನ ನೆರವಿನ ಉಲ್ಲೇಖ ಅಥವಾ ಅಂತಹ ಭರವಸೆಯೂ ಇರಲಿಲ್ಲ ಎಂದು ಕುರೈಷಿ ವಿವರಿಸಿದ್ದಾರೆ.
DOGEನ ಪೋಸ್ಟ್ ಗೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದ ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು, ‘ಭಾರತದಲ್ಲಿ ಮತದಾನಕ್ಕಾಗಿ 21 ಮಿಲಿಯನ್ ಡಾಲರ್ ನಿಗದಿ? ಇದು ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಬಾಹ್ಯ ಹಸ್ತಕ್ಷೇಪಕ್ಕೆ ಸಮನಾಗಿದೆ. ಇದರಿಂದ ಯಾರಿಗೆ ಲಾಭವಾಗುತ್ತಿತ್ತು? ಖಂಡಿತವಾಗಿಯೂ ಆಡಳಿತ ಪಕ್ಷಕ್ಕಲ್ಲ’ ಎಂದೂ ಹೇಳಿದ್ದರು.
ಈಗ ರದ್ದುಗೊಂಡಿರುವ ಈ ಕಾರ್ಯಕ್ರಮವು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾದ ಶಕ್ತಿಗಳು ಭಾರತೀಯ ಸಂಸ್ಥೆಗಳಲ್ಲಿ ನುಸುಳಲು ಅನುವು ಮಾಡಿಕೊಟ್ಟಿತ್ತು ಎನ್ನುವುದನ್ನು ಬೆಟ್ಟು ಮಾಡಿದೆ ಎಂದು ಅವರು ಹೇಳಿದ್ದರು.
ಉಭಯ ಕಡೆಗಳಲ್ಲಿ ಯಾವುದೇ ರೀತಿಯ ಆರ್ಥಿಕ ಅಥವಾ ಕಾನೂನು ಬಾಧ್ಯತೆ ಇರುವುದಿಲ್ಲ ಎನ್ನುವುದನ್ನು ಒಪ್ಪಂದದಲ್ಲಿ ಸ್ಪಷ್ಟಪಡಿಸಲಾಗಿತ್ತು ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿರುವ ಕುರೈಷಿ,ಯಾವುದೇ ಅಸ್ಪಷ್ಟತೆಗೆ ಅವಕಾಶ ನೀಡದಿರಲು ಒಪ್ಪಂದದಲ್ಲಿ ಎರಡು ಕಡೆಗಳಲ್ಲಿ ಈ ಷರತ್ತನ್ನು ಉಲ್ಲೇಖಿಸಲಾಗಿತ್ತು. ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಯಾವುದೇ ನಿಧಿಯ ಉಲ್ಲೇಖವು ಸಂಪೂರ್ಣವಾಗಿ ಸುಳ್ಳು ಮತ್ತು ದುರುದ್ದೇಶಪೂರಿತವಾಗಿದೆ ಎಂದು ಹೇಳಿದ್ದಾರೆ.
ಕುರೈಷಿ ಜು.30,2010ರಿಂದ ಜೂ.10, 2012ರವರೆಗೆ ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದರು.







