ಸಾಂವಿಧಾನಿಕ ಸಿಂಧುತ್ವ ಎಂದರೆ ಅಪೇಕ್ಷಣೀಯ ಎಂದರ್ಥವಲ್ಲ: ಮಾಜಿ ಸಿಜೆಐ ಸಂಜೀವ್ ಖನ್ನಾ

ಸಂಜೀವ ಖನ್ನಾ | PC : ANI
ಹೊಸದಿಲ್ಲಿ,ಆ.17: ಪ್ರಸ್ತಾವವೊಂದರ ಸಾಂವಿಧಾನಿಕ ಸಿಂಧುತ್ವವು ಯಾವದೇ ರೀತಿಯಲ್ಲಿ ಅದರ ನಿಬಂಧನೆಗಳ ಅಪೇಕ್ಷಣೀಯತೆ ಅಥವಾ ಅಗತ್ಯವನ್ನು ಸೂಚಿಸುವುದಿಲ್ಲ ಎಂದು ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ಸಂಜೀವ ಖನ್ನಾ ಅವರು ಏಕಕಾಲಿಕ ಚುನಾವಣೆ ಮಸೂದೆಯನ್ನು ಪರಿಶೀಲಿಸುತ್ತಿರುವ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.
ಆದಾಗ್ಯೂ ಖನ್ನಾ ಅವರು ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಬಗ್ಗೆ ದೇಶದ ಒಕ್ಕೂಟ ರಚನೆಯನ್ನು ದುರ್ಬಲಗೊಳಿಸುವುದರ ಕುರಿತು ವಾದಗಳು ಉದ್ಭವಿಸಬಹುದು ಎಂದು ಸಮಿತಿಗೆ ನೀಡಿರುವ ಲಿಖಿತ ಅಭಿಪ್ರಾಯದಲ್ಲಿ ತಿಳಿಸಿದ್ದಾರೆ. ಈ ಪರಿಕಲ್ಪನೆಯನ್ನು ಬೆಂಬಲಿಸುವ ಮತ್ತು ಟೀಕಿಸುವ ವಿವಿಧ ಪ್ರತಿಪಾದನೆಗಳನ್ನು ಅವರು ಪಟ್ಟಿ ಮಾಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಬಿಜೆಪಿ ಸಂಸದ್ ಪಿ.ಪಿ.ಚೌಧರಿ ನೇತೃತ್ವದ ಸಮಿತಿಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಹೆಚ್ಚಿನ ತಜ್ಞರು, ಪ್ರಸ್ತಾವನೆಗಳು ಅಸಾಂವಿಧಾನಿಕವಾಗಿವೆ ಎಂಬ ಆರೋಪವನ್ನು ತಿರಸ್ಕರಿಸಿದ್ದಾರೆ. ಆದರೆ ಮಸೂದೆಯಲ್ಲಿನ ಪ್ರಸ್ತುತ ನಿಬಂಧನೆಗಳೊಂದಿಗೆ ಕೆಲವು ಸಮಸ್ಯೆಗಳನ್ನು ಬೆಟ್ಟು ಮಾಡಿದ್ದಾರೆ.
ಮಂಗಳವಾರ ಸಮಿತಿಯೊಂದಿಗೆ ಸಂವಾದವನ್ನು ನಡೆಸಲಿರುವ ನ್ಯಾ.ಖನ್ನಾ, ಮಸೂದೆಯಲ್ಲಿ ಚುನಾವಣಾ ಆಯೋಗಕ್ಕೆ ನೀಡಲಾಗಿರುವ ಅಧಿಕಾರ ವ್ಯಾಪ್ತಿಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿರುವ ಇತರ ಕೆಲವು ಮಾಜಿ ಸಿಜೆಐಗಳೊಂದಿಗೆ ಧ್ವನಿಗೂಡಿಸಿದ್ದಾರೆ.
ಮಸೂದೆಯು ಲೋಕಸಭಾ ಚುನಾವಣೆಯೊಂದಿಗೆ ವಿಧಾನಸಭೆಯೊಂದರ ಚುನಾವಣೆಯನ್ನು ನಡೆಸದಿರುವ ಬಗ್ಗೆ ನಿರ್ಧರಿಸಲು ಮತ್ತು ಈ ನಿಟ್ಟಿನಲ್ಲಿ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲು ಚುನಾವಣಾ ಆಯೋಗಕ್ಕೆ ಅನಿಯಂತ್ರಿತ ಅಧಿಕಾರವನ್ನು ನೀಡುತ್ತದೆ ಎಂದು ನ್ಯಾ.ಖನ್ನಾ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ನಿಬಂಧನೆಯು ಸಂವಿಧಾನದ ಮೂಲ ರಚನೆಯನ್ನು ಮತ್ತು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂಬ ಕಾರಣದಿಂದ ಪ್ರಶ್ನಿಸಲು ಮುಕ್ತವಾಗಿದೆ ಎಂದು ಖನ್ನಾ ತನ್ನ ಲಿಖಿತ ಅಭಿಪ್ರಾಯದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ವಿಧಿ 14 ಕಾನೂನಿನ ಮುಂದೆ ಸಮಾನತೆಗೆ ಸಂಬಂಧಿಸಿದೆ.
ಚುನಾವಣಾ ಆಯೋಗದಿಂದ ಚುನಾವಣೆಗಳ ಮುಂದೂಡಿಕೆಯು ಪರೋಕ್ಷವಾಗಿ ರಾಷ್ಟ್ರಪತಿ ಆಡಳಿತಕ್ಕೆ ಕಾರಣವಾಗಬಹುದು. ಅಂದರೆ ಕೇಂದ್ರ ಸರಕಾರವು ರಾಜ್ಯ ಸರಕಾರದ ನಿಯಂತ್ರಣವನ್ನು ವಹಿಸಿಕೊಳ್ಳಬಹುದು. ಇದು ಸಂವಿಧಾನದಲ್ಲಿ ಹೇಳಲಾಗಿರುವ ಒಕ್ಕೂಟ ಸ್ವರೂಪವನ್ನು ಉಲ್ಲಂಘಿಸುವುದರಿಂದ ನ್ಯಾಯಾಲಯದಲ್ಲಿ ಪ್ರಶ್ನಾರ್ಹವಾಗುತ್ತದೆ ಎಂದೂ ನ್ಯಾ.ಖನ್ನಾ ಹೇಳಿದ್ದಾರೆ.
ಮಸೂದೆಗೆ ಸಂಬಂಧಿಸಿದ ವಿವಿಧ ವಾದಗಳ ಕುರಿತು ಪ್ರತಿಕ್ರಿಯಿಸಿರುವ ಅವರು,1951-52,1957,1962 ಮತ್ತು 1967ರಲ್ಲಿ ಏಕಕಾಲಿಕ ಚುನಾವಣೆಗಳನ್ನು ನಡೆದಿದ್ದು ಕಾಕತಾಳೀಯವಾಗಿತ್ತು,ಖಂಡಿತವಾಗಿಯೂ ಅದು ಸ್ಪಷ್ಟ ಅಥವಾ ಸೂಚ್ಯ ಸಾಂವಿಧಾನಿಕ ಆದೇಶವಾಗಿರಲಿಲ್ಲ ಎಂದು ಹೇಳಿದ್ದಾರೆ.
ಕಾರ್ಯಕ್ಷಮತೆಯನ್ನು ಆಧರಿಸಿ ಮಾಡುವ ಪರಿಶೀಲನೆಗೂ ನ್ಯಾಯಾಂಗ ಪರಿಶೀಲನೆಗೂ ವ್ಯತ್ಯಾಸವಿದೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ಗಳು ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಾಗ ಅದು ಕೇವಲ ಶಾಸಕಾಂಗ ಅಧಿಕಾರದ ಹಾಗೂ ತಿದ್ದುಪಡಿ ಅಥವಾ ನಿಬಂಧನೆಯು ಸಾಂವಿಧಾನಿಕ ಮಿತಿಗಳನ್ನು ಉಲ್ಲಂಘಿಸುವುದಿಲ್ಲ ಎನ್ನುವುದರ ದೃಢೀಕರಣವಾಗಿರುತ್ತದೆ. ನ್ಯಾಯಾಲಯದ ತೀರ್ಪುಗಳು ಯಾವುದೇ ರೀತಿಯಲ್ಲಿಯೂ ಅಂತಹ ನಿಬಂಧನೆಗಳ ಅಪೇಕ್ಷಣೀಯತೆ ಅಥವಾ ಅಗತ್ಯವನ್ನು ಸೂಚಿಸುವುದಿಲ್ಲ ಎಂದು ನ್ಯಾ.ಖನ್ನಾ ಹೇಳಿದ್ದಾರೆ.







