ತೆಲಂಗಾಣ ಸಚಿವ ಸಂಪುಟಕ್ಕೆ ಮಾಜಿ ಕ್ರಿಕೆಟಿಗ ಅಝರುದ್ದೀನ್ ಸೇರ್ಪಡೆ ಸಾಧ್ಯತೆ

ಮುಹಮ್ಮದ್ ಅಝರುದ್ದೀನ್ (Photo: PTI)
ಹೈದರಾಬಾದ್: ಭಾರತದ ಮಾಜಿ ಕ್ರಿಕೆಟಿಗ ಹಾಗೂ ತೆಲಂಗಾಣದ ಕಾಂಗ್ರೆಸ್ ನಾಯಕ ಮುಹಮ್ಮದ್ ಅಝರುದ್ದೀನ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸುವ ತೀರ್ಮಾನ ಅಂತಿಮ ಹಂತಕ್ಕೆ ತಲುಪಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಜುಬಿಲಿ ಹಿಲ್ಸ್ ಉಪಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಸೆಲೆಯಲು ಕಾಂಗ್ರೆಸ್ ಈ ಕ್ರಮ ಕೈಗೊಂಡಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ ಎಂದು India Today ವರದಿ ಮಾಡಿದೆ.
ಆಗಸ್ಟ್ನಲ್ಲಿ ರಾಜ್ಯಪಾಲರ ಕೋಟಾದಡಿ ಎಂಎಲ್ಸಿಯಾಗಿ ನಾಮನಿರ್ದೇಶನಗೊಂಡ ಅಝರುದ್ದೀನ್ ಅವರನ್ನು ಸಚಿವರನ್ನಾಗಿ ನೇಮಿಸಲು ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ (ಎಐಸಿಸಿ) ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. “ನಾಳೆ (ಶುಕ್ರವಾರ) ಪ್ರಮಾಣವಚನ ನಡೆಯುವ ಸಾಧ್ಯತೆ ಇದೆ,” ಎಂದು ಮೂಲಗಳು ಹೇಳಿದ್ದು, ರಾಜ್ಯಪಾಲರಿಂದ ಅಧಿಕೃತ ಅನುಮೋದನೆ ಬಾಕಿಯಿದೆ ಎಂದು ತಿಳಿಸಿವೆ.
ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ನೇತೃತ್ವದ ಪ್ರಸ್ತುತ ಸಚಿವ ಸಂಪುಟದಲ್ಲಿ 15 ಮಂದಿ ಸದಸ್ಯರಿದ್ದು, ಅಲ್ಪಸಂಖ್ಯಾತ ಸಮುದಾಯದಿಂದ ಯಾರಿಗೂ ಇನ್ನೂ ಸ್ಥಾನ ಸಿಕ್ಕಿಲ್ಲ. ಸಂವಿಧಾನಾತ್ಮಕ ಮಿತಿ ಪ್ರಕಾರ ಸರ್ಕಾರಕ್ಕೆ ಇನ್ನೂ ಮೂರು ಸ್ಥಾನ ಖಾಲಿಯಿದೆ.
ಮುಸ್ಲಿಂ ಸಮುದಾಯದ ನಾಯಕರಿಗೆ ಪ್ರಾತಿನಿಧ್ಯ ನೀಡಲು ಕಾಂಗ್ರೆಸ್ ತೀರ್ಮಾನ ಕೈಗೊಂಡಿದ್ದು, ಇದರಿಂದ ಪಕ್ಷದ ನೆಲೆಯು ಬಲವಾಗಬಹುದು ಎಂಬ ನಂಬಿಕೆ ವ್ಯಕ್ತವಾಗಿದೆ. ಜುಬಿಲಿ ಹಿಲ್ಸ್ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮುಸ್ಲಿಂ ಮತದಾರರಿದ್ದು, ಈ ಹಿನ್ನೆಲೆಯಲ್ಲಿ ಅಝರುದ್ದೀನ್ ಸೇರ್ಪಡೆ ರಾಜಕೀಯವಾಗಿ ಮಹತ್ವ ಪಡೆದಿದೆ.
ಈ ವರ್ಷದ ಜೂನ್ನಲ್ಲಿ ಜುಬಿಲಿ ಹಿಲ್ಸ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿ ಬಿಆರ್ಎಸ್ ಶಾಸಕ ಮಗಂತಿ ಗೋಪಿನಾಥ್ ಅವರು ನಿಧನರಾದರು. ಹಾಗಾಗಿ ಆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.
ಬಿಜೆಪಿ ಈ ನಿರ್ಧಾರವನ್ನು ಟೀಕಿಸಿದ್ದು, “ಜುಬಿಲಿ ಹಿಲ್ಸ್ ಉಪಚುನಾವಣೆ ನಡೆಯುತ್ತಿರುವ ವೇಳೆ ಅಝರುದ್ದೀನ್ ಅವರನ್ನು ಸಚಿವರನ್ನಾಗಿ ಮಾಡಲು ಕಾಂಗ್ರೆಸ್ ಮುಂದಾಗಿದೆ. ಇದು ತುಷ್ಟೀಕರಣದ ಕ್ರಿಯೆ ಮತ್ತು ನೈತಿಕ ನೀತಿ ಸಂಹಿತೆಯ ಉಲ್ಲಂಘನೆ,” ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್. ರಾಮಚಂದರ್ ರಾವ್ ಆಕ್ಷೇಪಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಎಸ್.ಎ. ಸಂಪತ್ ಕುಮಾರ್, “ಅಲ್ಪಸಂಖ್ಯಾತ ಸಮುದಾಯದ ನಾಯಕರಿಂದ ಪ್ರಾತಿನಿಧ್ಯ ಕೋರಿ ಬಂದ ಒತ್ತಾಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಝರುದ್ದೀನ್ ಖ್ಯಾತ ಕ್ರಿಕೆಟಿಗ, ಯುಪಿಯ ಮಾಜಿ ಸಂಸದ ಹಾಗೂ ಟಿಪಿಸಿಸಿಯ ಕಾರ್ಯಕಾರಿ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಸದಾ ಧರ್ಮದ ಹೆಸರಿನಲ್ಲಿ ವಿಭಜನೆ ತರುತ್ತದೆ,” ಎಂದು ಹೇಳಿದರು.
ಅಝರುದ್ದೀನ್ ಸಚಿವ ಸಂಪುಟಕ್ಕೆ ಸೇರಿದರೆ, ಅವರು ರೇವಂತ್ ರೆಡ್ಡಿ ಸರ್ಕಾರದ ಮೊದಲ ಮುಸ್ಲಿಂ ಸಚಿವರಾಗಲಿದ್ದಾರೆ.
ಈ ಕ್ರಮವ ತೆಲಂಗಾಣದಾಚೆಯೂ ರಾಜಕೀಯ ಪ್ರಭಾವ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಈ ಕ್ರಮ ಕಾಂಗ್ರೆಸ್ನ ರಾಷ್ಟ್ರವ್ಯಾಪಿ ರಾಜಕೀಯ ತಂತ್ರದ ಭಾಗವಾಗಿರಬಹುದು ಎಂಬ ಅಂದಾಜು ವ್ಯಕ್ತವಾಗಿದೆ.







