ಆರ್ ಟಿ ಐ ಕಾಯ್ದೆಗೆ ಪ್ರಸ್ತಾವಿತ ತಿದ್ದುಪಡಿಗೆ ಮಾಜಿ ಅಧಿಕಾರಿಗಳ ವಿರೋಧ

ಆರ್ ಟಿ ಐ ಕಾಯ್ದೆ | PC : RTI Act
ಹೊಸದಿಲ್ಲಿ: ಸರಕಾರಿ ಅಧಿಕಾರಿಗಳ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಗೊಳಿಸುವುದನ್ನು ಅನುಮತಿಸದಿರಲು ಮಾಹಿತಿ ಹಕ್ಕು ಕಾಯ್ದೆಯನ್ನು ತಿದ್ದುಪಡಿಗೊಳಿಸುವ ಪ್ರಸ್ತಾವಿತ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ ಕಾಯ್ದೆಯ ನಿಬಂಧನೆಯೊಂದನ್ನು ವಿರೋಧಿಸಿರುವ 95 ನಿವೃತ್ತ ಸರಕಾರಿ ಅಧಿಕಾರಿಗಳು ಮತ್ತು ರಾಜತಾಂತ್ರಿಕರ ಗುಂಪು ಅದನ್ನು ಹಿಂದೆಗೆದುಕೊಳ್ಳುವಂತೆ ಬುಧವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.
ಈ ತಿದ್ದುಪಡಿಯು ಆರ್ಟಿಐ ಕಾಯ್ದೆಯನ್ನು ಹೆಚ್ಚು ನಿಷ್ಪರಿಣಾಮಕಾರಿಯನ್ನಾಗಿ ಮಾಡುತ್ತದೆ ಎಂದು ಕಾನ್ ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್(ಸಿಸಿಜಿ) ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದೆ.
ಕೇಂದ್ರ ಸರಕಾರವು ವೈಯಕ್ತಿಕ ಮಾಹಿತಿಯನ್ನು ಬಹಿರಂಗಗೊಳಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ ಕಾಯ್ದೆ,2023ರ ಕಲಂ 44(3)ರ ಮೂಲಕ ಆರ್ಟಿಐ ಕಾಯ್ದೆಯ ಕಲಂ 8(1)(ಜೆ) ಅನ್ನು ತಿದ್ದುಪಡಿಗೊಳಿಸಲು ಮುಂದಾಗಿದೆ.
ಮಾಹಿತಿ ಹಕ್ಕು ಕಾಯ್ದೆಯನ್ನು ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ತತ್ವಗಳನ್ನು ಎತ್ತಿಹಿಡಿಯಲು ರೂಪಿಸಲಾಗಿದ್ದು,ಪ್ರಸ್ತಾವಿತ ಬದಲಾವಣೆಯು ಈ ತತ್ವಗಳಿಗೆ ಗಂಭೀರ ಬೆದರಿಕೆಯಾಗಿದೆ ಎಂದು ಟೀಕಾಕಾರರು ಬಣ್ಣಿಸಿದ್ದಾರೆ.
ಮಾಹಿತಿ ಹಕ್ಕನ್ನು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಚಿತಪಡಿಸಿರುವ ಸಂವಿಧಾನದ ವಿಧಿ 19(1)ರಿಂದ ಪಡೆಯಲಾಗಿದೆ ಎಂದು ತನ್ನ ಪತ್ರದಲ್ಲಿ ಹೇಳಿರುವ ಸಿಸಿಜಿ,ಕಲಂ 8(1)(ಜೆ)ಗೆ ಪ್ರಸ್ತಾವಿತ ತಿದ್ದುಪಡಿಗಳು ಸದ್ರಿ ಕಾಯ್ದೆಯ ಕಲಂ 8ರಡಿ ನೀಡಲಾಗಿರುವ ವಿನಾಯಿತಿಗಳ ವ್ಯಾಪ್ತಿಯನ್ನು ವಿವೇಚನೆಯಿಲ್ಲದೆ ವಿಸ್ತರಿಸುವ ಮೂಲಕ ಆರ್ಟಿಐ ಕಾಯ್ದೆಯ ನಿರ್ಣಾಯಕ ನಿಬಂಧನೆಯನ್ನು ದುರ್ಬಲಗೊಳಿಸುತ್ತವೆ ಎಂದು ಪ್ರತಿಪಾದಿಸಿದೆ.
ಸಂಸತ್ತಿಗೆ ಅಥವಾ ರಾಜ್ಯ ಶಾಸಕಾಂಗಕ್ಕೆ ನಿರಾಕರಿಸಲಾಗದ ಮಾಹಿತಿಯನ್ನು ಯಾವುದೇ ವ್ಯಕ್ತಿಗೆ ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿರುವ ಆರ್ಟಿಐ ಕಾಯ್ದೆಯ ಕಲಂ 8(1)ನ್ನು ಸಹ ಪ್ರಸ್ತಾವಿತ ತಿದ್ದುಪಡಿಯಲ್ಲಿ ಕೈಬಿಡಲಾಗಿದೆ ಎಂದು ಸಿಸಿಜಿ ತನ್ನ ಪತ್ರದಲ್ಲಿ ಬೆಟ್ಟು ಮಾಡಿದೆ.