ಭಾರತ ನೀಡಿದ್ದ 9 ಉಗ್ರರ ಪಟ್ಟಿಯನ್ನು ಕೆನಡಾ ಉಪೇಕ್ಷಿಸಿತ್ತು
ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆರೋಪ

ಅಮರಿಂದರ್ ಸಿಂಗ್ | Photo: PTI
ಚಂಡೀಗಢ: ಭಾರತವು 2018ರಲ್ಲಿ ಒಂಭತ್ತು ಭಯೋತ್ಪಾದಕರ ಪಟ್ಟಿಯೊಂದನ್ನು ಕೆನಡಾ ಸರಕಾರಕ್ಕೆ ಕಳುಹಿಸಿತ್ತು, ಆದರೆ ಆ ದೇಶದ ಪ್ರಧಾನಿ ಜಸ್ಟಿನ್ ಟ್ರೂಡೊ ಅದನ್ನು ಉಪೇಕ್ಷಿಸಿದ್ದರು ಎಂದು ಪಂಜಾಬಿನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶನಿವಾರ ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಯಲ್ಲಿ ಬರೆದ ಲೇಖನವೊಂದರಲ್ಲಿ ಆರೋಪಿಸಿದ್ದಾರೆ.
ಖಾಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ಹಾಗೂ ಕೆನಡಾ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ನ ಹತ್ಯೆಯಲ್ಲಿ ಭಾರತದ ಏಜಂಟ್ ಗಳ ಕೈವಾಡವಿದೆ ಎಂಬುದಾಗಿ ಕೆನಡಾ ಪ್ರಧಾನಿ ಸಂಸತ್ ನಲ್ಲಿ ಹೇಳಿಕೆ ನೀಡಿದ ಆರು ದಿನಗಳ ಬಳಿಕ ಬಿಜೆಪಿ ನಾಯಕ ಅಮರಿಂದರ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ನಿಜ್ಜರ್ ಸಿಖ್ಖರಿಗಾಗಿ ‘ಖಾಲಿಸ್ತಾನ’ವೆಂಬ ಪ್ರತ್ಯೇಕ ದೇಶ ಸ್ಥಾಪನೆಯ ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾನೆ.
ನಿಜ್ಜರ್ ನನ್ನು ಜೂನ್ 18ರಂದು ವ್ಯಾಂಕೋವರ್ ಸಮೀಪದ ಸರ್ರೆಯಲ್ಲಿರುವ ಗುರುದ್ವಾರವೊಂದರ ವಾಹನ ನಿಲುಗಡೆ ಸ್ಥಳದಲ್ಲಿ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಈ ಹತ್ಯೆಯಲ್ಲಿ ಭಾರತದ ಏಜಂಟ್ ಗಳ ಕೈವಾಡವಿದೆ ಎಂಬುದಾಗಿ ಟ್ರೂಡೊ ಆರೋಪಿಸಿದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ನೆಲೆಸಿದೆ.
“ಟ್ರೂಡೊರ ಆರೋಪಗಳು ಸಂಪೂರ್ಣ ಅಸಂಬದ್ಧ, ಘೋರ, ದುರುದ್ದೇಶಪೂರಿತ ಮತ್ತು ಆಕ್ರೋಶಕಾರಕ’’ ಎಂಬುದಾಗಿ ಶನಿವಾರ ಅಮರಿಂದರ್ ಸಿಂಗ್ ಬಣ್ಣಿಸಿದರು. ‘‘ನಿಜ್ಜರ್ ಹತ್ಯೆಯ ಕುರಿತ ತನಿಖೆಯಲ್ಲಿ ಭಾರತ ಸಹಕರಿಸಬೇಕೆಂದು ಕೆನಡಾ ಒತ್ತಾಯಿಸುತ್ತಿದೆ, ಆದರೆ ಉಗ್ರಗಾಮಿಗಳಿಗೆ ಆಶ್ರಯ ನೀಡುವ ವಿಚಾರದಲ್ಲಿ ಭಾರತದ ಕಳವಳಗಳನ್ನು ಅದು ಹಲವು ಬಾರಿ ನಿರ್ಲಕ್ಷಿಸಿತ್ತು’’ ಎಂದು ಅವರು ಹೇಳಿದರು.
“ನಾನು ಪಂಜಾಬ್ ಮುಖ್ಯಮಂತ್ರಿಯಾಗಿದ್ದಾಗ, 2018 ಫೆಬ್ರವರಿಯಲ್ಲಿ ಭಾರತ ಸರಕಾರದ ಪರವಾಗಿ ಅಮೃತಸರದಲ್ಲಿ ಟ್ರೂಡೊರನ್ನು ಭೇಟಿಯಾಗಿದ್ದೆ. ಆಗ ‘ಎ’ ವರ್ಗದ ಒಂಭತ್ತು ಭಯೋತ್ಪಾದಕರ ಹೆಸರುಗಳನ್ನು ಒಳಗೊಂಡ ಪಟ್ಟಿಯೊಂದನ್ನು ಅವರಿಗೆ ನೀಡಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೆ’’ ಎಂಬುದಾಗಿ ಅಮರಿಂದರ್ ಸಿಂಗ್ ಪತ್ರಿಕೆಯಲ್ಲಿ ಬರೆದಿದ್ದಾರೆ. ‘‘ಆದರೆ, ಕೆನಡಾ ಸರಕಾರವು ಆ ಪಟ್ಟಿಯನ್ನು ಸಂಪೂರ್ಣವಾಗಿ ಉಪೇಕ್ಷಿಸಿತು’’ ಎಂದರು.
1985ರಲ್ಲಿ ಏರ್ ಇಂಡಿಯಾ ವಿಮಾನವೊಂದರಲ್ಲಿ ಬಾಂಬ್ ಸ್ಫೋಟಿಸಿದ ಆರೋಪಿಗಳಿಗೆ ಟ್ರೂಡೊರ ತಂದೆ ಹಾಗೂ ಕೆನಡಾದ ಮಾಜಿ ಪ್ರಧಾನಿ ಪಿಯರಿ ಟ್ರೂಡೊ ಆಶ್ರಯ ನೀಡಿದ್ದರು ಎಂದು ಸಿಂಗ್ ಆರೋಪಿಸಿದರು. ಆ ಸ್ಫೋಟದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 329 ಪ್ರಯಾಣಿಕರು ಮೃತಪಟ್ಟಿದ್ದರು.







