ಹಿಂಡನ್ ಬರ್ಗ್ | ಮಾಧವಿ ಬುಚ್ ಗೆ ಲೋಕಪಾಲ ಕ್ಲೀನ್ ಚಿಟ್

Photo : PTI
ಹೊಸದಿಲ್ಲಿ: ಹಿಂಡನ್ ಬರ್ಗ್ ಪ್ರಕರಣದಲ್ಲಿ ಶೇರು ಮಾರಾಟ ಸಂಸ್ಥೆ ಸೆಬಿಯ ಮಾಜಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಅವರಿಗೆ ಲೋಕಪಾಲ ಬುಧವಾರ ಕ್ಲೀನ್ ಚಿಟ್ ನೀಡಿದೆ ಹಾಗೂ ಅವರ ವಿರುದ್ಧದ ದೂರುಗಳನ್ನು ತಳ್ಳಿಹಾಕಿದೆ. ಬುಚ್ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ಹೀಗಾಗಿ ತನಿಖೆಗೆ ಆದೇಶ ನೀಡಲು ಸಾಧ್ಯವಿಲ್ಲವೆಂದು ಎಂದು ಅದು ಹೇಳಿದೆ.
ಬುಚ್ ಹಾಗೂ ಆಕೆಯ ಪತಿ ಧವಲ್ ಬುಚ್ ಅವರು ಅದಾನಿ ಗ್ರೂಪ್ ಜೊತೆ ನಂಟು ಹೊಂದಿರುವ ಸಾಗರೋತ್ತರ ದೇಶದ ಫಂಡ್ ಒಂದರಲ್ಲಿ ಗಣನೀಯ ಮೊತ್ತದ ಹಣವನ್ನು ಹೂಡಿಕೆ ಮಾಡಿದ್ದರು ಎಂದು ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡನ್ ಬರ್ಗ್ ರಿಸರ್ಚ್ ತನ್ನ ವರದಿಯಲ್ಲಿ ಆರೋಪಿಸಿತ್ತು.
ಹಿಂಡನ್ ಬರ್ಗ್ ವರದಿಯನ್ನು ಆಧರಿಸಿ ಬುಚ್ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಹಲವರು ಲೋಕಪಾಲಕ್ಕೆ ದೂರುಗಳನ್ನು ಸಲ್ಲಿಸಿದ್ದರು.
ಆದರೆ ತಮ್ಮ ಮೇಲಿನ ಆರೋಪಗಳನ್ನು ಬುಚ್ ದಂಪತಿ ನಿರಾಕರಿಸಿದ್ದು, ಹಿಂಡನ್ ಬರ್ಗ್ ಸಂಸ್ಥೆಯು ಸೆಬಿಯ ವಿಶ್ವಸನೀಯತೆಯ ಮೇಲೆ ದಾಳಿ ನಡೆಸುತ್ತಿದೆ ಹಾಗೂ ತಮ್ಮ ಚಾರಿತ್ರ್ಯ ಹನನ ನಡೆಸುತ್ತಿದೆ ಎಂದು ಆಪಾದಿಸಿದ್ದರು.
ಆದಾನಿ ಸಮೂಹ ಕೂಡಾ ಈ ಆರೋಪಗಳು ದುರುದ್ದೇಶಪೂರಿತವಾಗಿವೆ ಹಾಗೂ ಆಯ್ದ ಸಾರ್ವಜನಿಕ ಮಾಹಿತಿಯನ್ನು ಹಿಂಡನ್ ಬರ್ಗ್ ದುರ್ಬಳಕೆ ಮಾಡಿಕೊಂಡಿದೆ ಎಂದು ಆಪಾದಿಸಿತ್ತು.
ಬುಚ್ ವಿರುದ್ಧದ ದೂರುದಾರರ ಆರೋಪಗಳು ಊಹೆ ಹಾಗೂ ಕಲ್ಪನೆಗಳಿಂದ ಕೂಡಿದ್ದು, ಅದಕ್ಕೆ ಯಾವುದೇ ದೃಡೀಕೃತವಾದ ಪುರಾವೆಗಳಿಲ್ಲ ಮತ್ತು ಅಪರಾಧದ ಅಂಶಗಳನ್ನು ಈ ಪ್ರಕರಣ ಒಳಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ದೂರುಗಳನ್ನು ತಿರಸ್ಕರಿಸಲಾಗಿದೆ ಎಂದು ಲೋಕಪಾಲ ಮುಖ್ಯಸ್ಥ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ಆರು ಮಂದಿಯ ನ್ಯಾಯಪೀಠ ತಿಳಿಸಿದೆ.







