ಬಿಜೆಪಿ ತೊರೆದ ಮಾಜಿ ಕೇಂದ್ರ ಸಚಿವೆ ಸೂರ್ಯಕಾಂತ ಪಾಟೀಲ್
“ನಾನು ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಕಲಿತಿದ್ದೇನೆ” ಎಂದ ಮಾಜಿ ಸಂಸದೆ

Photo : dainikprabhat.com
ಮುಂಬೈ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಮಹಾರಾಷ್ಟ್ರದಲ್ಲಿ ಕಳಪೆ ಪ್ರದರ್ಶನ ತೋರಿರುವ ಬೆನ್ನಿಗೇ, ಕೇಂದ್ರದ ಮಾಜಿ ಸಚಿವೆ ಸೂರ್ಯಕಾಂತ ಪಾಟೀಲ್ ಶನಿವಾರ ಪಕ್ಷವನ್ನು ತೊರೆದಿದ್ದಾರೆ. 2014ರಲ್ಲಿ ಶರದ್ ಪವಾರ್ ನೇತೃತ್ವದ ಎನ್ಸಿಪಿಯನ್ನು ತೊರೆದಿದ್ದ ಅವರು, ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿಂಗೋಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ಅವರಿಗೆ ಬಿಜೆಪಿಯ ಟಿಕೆಟ್ ದೊರೆತಿರಲಿಲ್ಲ. ಈ ಕುರಿತು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಮಹಾಯುತಿ ಮೈತ್ರಿಕೂಟದ ನಡುವಿನ ಸೀಟು ಹಂಚಿಕೆಯ ಸಂದರ್ಭದಲ್ಲಿ ಹಿಂಗೋಲಿ ಲೋಕಸಭಾ ಕ್ಷೇತ್ರವು ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯ ಪಾಲಾಗಿತ್ತು. ಹೀಗಾಗಿ ಬಿಜೆಪಿಯು ಸೂರ್ಯಕಾಂತ ಪಾಟೀಲ್ ಅವರನ್ನು ಹಡ್ಗಾಂವ್ ಹಿಮಾಯತ್ ನಗರ್ ವಿಧಾನಸಭಾ ಕ್ಷೇತ್ರದ ಚುನಾವಣಾ ಮುಖ್ಯಸ್ಥರನ್ನಾಗಿ ನೇಮಿಸಿತ್ತು.
ಆದರೆ, ಹಿಂಗೋಲಿ ಲೋಕಸಭಾ ಕ್ಷೇತ್ರದಲ್ಲಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆಯು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಎದುರು ಪರಾಭವಗೊಂಡಿತ್ತು.
ಇದಕ್ಕೂ ಮುನ್ನ, ಸೂರ್ಯಕಾಂತ ಪಾಟೀಲ್ ಅವರು ಹಿಂಗೋಲಿ-ನಾಂದೇಡ್ ಲೋಕಸಭಾ ಕ್ಷೇತ್ರವನ್ನು ನಾಲ್ಕು ಬಾರಿ ಸಂಸದರಾಗಿ ಹಾಗೂ ಒಂದು ಬಾರಿ ಶಾಸಕರಾಗಿ ಪ್ರತಿನಿಧಿಸಿದ್ದರು. ಯುಪಿಎ ಸರಕಾರದ ಅವಧಿಯಲ್ಲಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಬಿಜೆಪಿ ತೊರೆದಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, “ನಾನು ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಕಲಿತಿದ್ದೇನೆ. ಪಕ್ಷಕ್ಕೆ ನಾನು ಕೃತಜ್ಞಳಾಗಿರುತ್ತೇನೆ” ಎಂದು ಹೇಳಿದ್ದಾರೆ.







