ಮುಂದಿನ ವರ್ಷ ಅಯೋಧ್ಯೆ ಮಸೀದಿಗೆ ಶಿಲಾನ್ಯಾಸ ಸಾಧ್ಯತೆ
ಅಯೋಧ್ಯೆ ಮಸೀದಿ | Photo: X
ಮುಂಬೈ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಯ ಶಿಲಾನ್ಯಾಸ ಕಾರ್ಯಕ್ರಮವು ಮುಂದಿನ ವರ್ಷ ನಡೆಯುವ ಸಾಧ್ಯತೆಯಿದೆ ಮತ್ತು ಸಂತರು, ಪೀರ್ ಗಳು ಮತ್ತು ಮೌಲ್ವಿಗಳನ್ನು ಸಮಾರಂಭಕ್ಕೆ ಆಹ್ವಾನಿಸಲಾಗುವುದು ಎಂದು ಅಯೋಧ್ಯೆ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಜಿ ಅರ್ಫಾತ್ ಶೇಖ್ ಅವರು ಶುಕ್ರವಾರ ತಿಳಿಸಿದರು.
ಮಸೀದಿಯ ನಿರ್ಮಾಣದ ಹೊಣೆಯನ್ನು ಇಂಡೋ-ಇಸ್ಲಾಮಿಕ್ ಕಲ್ಚರ್ ಫೌಂಡೇಷನ್ ಗೆ ವಹಿಸಲಾಗಿದೆ.
ಮುಂದಿನ ಐದಾರು ವರ್ಷಗಳಲ್ಲಿ ಮಸೀದಿಯು ಸಿದ್ಧಗೊಂಡಾಗ ಮೆಕ್ಕಾ ಮಸೀದಿಯಲ್ಲಿ ನಮಾಝ್ ನ ನೇತೃತ್ವ ವಹಿಸುತ್ತಿರುವ ಇಮಾಮ್-ಎ-ಹರಾಂ ಸೇರಿದಂತೆ ಎಲ್ಲ ದೇಶಗಳ ಹಿರಿಯ ಮೌಲ್ವಿಗಳನ್ನು ಆಹ್ವಾನಿಸಲಾಗುವುದು. ಮಸೀದಿಯು ಆಗ್ರಾದ ತಾಜಮಹಲ್ ಗಿಂತ ಸುಂದರವಾಗಿರಲಿದೆ ಎಂದು ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರೂ ಆಗಿರುವ ಶೇಖ್ ತಿಳಿಸಿದರು.
ಪ್ರವಾದಿಯವರ ಹೆಸರನ್ನು ಹೊಂದಿರುವ ಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಯು ಬಾಬ್ರಿ ಮಸೀದಿಗೆ ಬದಲಾಗಿ ಅಯೋಧ್ಯೆಯಿಂದ 25 ಕಿ.ಮೀ.ದೂರದ ಧನ್ನಿಪುರದಲ್ಲಿ ನಿರ್ಮಾಣಗೊಳ್ಳಲಿದೆ.
ಅಯೋಧ್ಯೆ ರಾಮ ಮಂದಿರ ವಿವಾದದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಉತ್ತರ ಪ್ರದೇಶ ಸರಕಾರವು ಮಸೀದಿ ನಿರ್ಮಾಣಕ್ಕೆ ನಿವೇಶನವನ್ನು ನೀಡಿದೆ.
ನಿವೇಶನದಲ್ಲಿ ಮಸೀದಿಯ ಜೊತೆಗೆ ದಂತಶಾಸ್ತ್ರ, ಕಾನೂನು, ವಾಸ್ತುಶಿಲ್ಪ ಮತ್ತು ಅಂತರಾಷ್ಟ್ರೀಯ ಸಂಬಂಧಗಳಂತಹ ವಿವಿಧ ವಿಷಯಗಳಲ್ಲಿ ಕಾಲೇಜುಗಳನ್ನು ನಿರ್ಮಿಸಲೂ ಮಸೀದಿ ಅಭಿವೃದ್ಧಿ ಸಮಿತಿಯು ಯೋಜಿಸಿದೆ.
ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ ಎರಡು ಆಸ್ಪತ್ರೆಗಳು ಸಂಕೀರ್ಣದಲ್ಲಿ ತಲೆಯೆತ್ತಲಿದ್ದು, ಎಲ್ಲ ಧರ್ಮಗಳ ಜನರಿಗಾಗಿ ಸಸ್ಯಾಹಾರ ಸಮುದಾಯ ಕೇಂದ್ರವನ್ನೂ ನಿರ್ಮಿಸಲಾಗುವುದು