ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಲಾಕ್ ಆದ ಕಾರು: 4 ಮಕ್ಕಳು ಉಸಿರುಗಟ್ಟಿ ಮೃತ್ಯು

Photo credit: newindianexpress.com
ವಿಶಾಖಪಟ್ಟಣ: ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕಾರಿನ ಬಾಗಿಲು ಲಾಕ್ ಆದ ಪರಿಣಾಮ 4 ಮಕ್ಕಳು ಉಸಿರುಗಟ್ಟಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ರವಿವಾರ ನಡೆದಿದೆ.
ವಿಜಯನಗರಂ ಕಂಟೋನ್ಮೆಂಟ್ ವ್ಯಾಪ್ತಿಯ ದ್ವಾರಪುಡಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಲ್ವರು ಮಕ್ಕಳು ಆಟವಾಡುತ್ತಿದ್ದಾಗ ನಿಲ್ಲಿಸಿದ್ದ ಕಾರಿನ ಒಳಹೋಗಿದ್ದಾರೆ. ಕೂಡಲೇ ಆಕಸ್ಮಿಕವಾಗಿ ಕಾರಿನ ಬಾಗಿಲುಗಳು ಲಾಕ್ ಆಗಿದ್ದು, ಅವರು ಒಳಗೆ ಸಿಲುಕಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ಅಟವಾಡುತ್ತಿದ್ದ ಮಕ್ಕಳು ಬೆಳಿಗ್ಗೆಯಿಂದ ಕಾಣದ ಕಾರಣ ಪೋಷಕರು ಮಕ್ಕಳಿಗಾಗಿ ತೀವ್ರ ಹುಡುಕಾಟ ನಡೆಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಅಂತಿಮವಾಗಿ, ಅವರ ಮೃತದೇಹಗಳು ಸ್ಥಳೀಯ ಮಹಿಳಾ ಮಂಡಳಿ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಪತ್ತೆಯಾಗಿವೆ.
ಮೃತಪಟ್ಟ ಮಕ್ಕಳನ್ನು 8 ವರ್ಷದ ಉದಯ್, 8 ವರ್ಷದ ಚಾರುಮತಿ, 6 ವರ್ಷದ ಚರಿಷ್ಮಾ, ಮತ್ತು 6 ವರ್ಷದ ಮನಸ್ವಿ ಎಂದು ಗುರುತಿಸಲಾಗಿದೆ. ಮಕ್ಕಳು ರವಿವಾರ ಬೆಳಿಗ್ಗೆ ಆಟವಾಡಲು ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ. ಮೃತಪಟ್ಟ ಮಕ್ಕಳ ಪೈಕಿ ಚಾರುಮತಿ ಮತ್ತು ಚರಿಷ್ಮಾ ಸಹೋದರಿಯರು ಎನ್ನಲಾಗಿದೆ. ಉಳಿದ ಇಬ್ಬರು ಅವರ ಸ್ನೇಹಿತರು ಎಂದು ತಿಳಿದುಬಂದಿದೆ.
ಮಕ್ಕಳು ಬಹಳ ಸಮಯವಾದರೂ ಮನೆಗೆ ಹಿಂತಿರುಗದಿದ್ದಾಗ, ಪೋಷಕರು ಅವರನ್ನು ಹುಡುಕಲು ಪ್ರಾರಂಭಿಸಿದ್ದರು.
ಆ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನ ಬಾಗಿಲುಗಳನ್ನು ಲಾಕ್ ಮಾಡಿರಲಿಲ್ಲ. ಮಕ್ಕಳು ಅವುಗಳನ್ನು ತೆರೆದು ಒಳಗೆ ಕುಳಿತರು. ನಂತರ ಬಾಗಿಲುಗಳು ಆಕಸ್ಮಿಕವಾಗಿ ಲಾಕ್ ಆಗಿ ಒಳಗೆ ಸಿಲುಕಿಕೊಂಡರು. ನಾಲ್ವರೂ ಉಸಿರುಗಟ್ಟುವಿಕೆಯಿಂದ ಮೃತಪಟ್ಟರು ಎಂದು ತಿಳಿದು ಬಂದಿದೆ.
ನಾಲ್ಕು ಮಕ್ಕಳು ಮೃತಪಟ್ಟಿರುವ ಘಟನೆಯು ಇಡೀ ಗ್ರಾಮವನ್ನು ಕತ್ತಲೆಯಲ್ಲಿ ಮುಳುಗಿಸಿದೆ.
ಕಳೆದ ತಿಂಗಳಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ನಡೆದ ಎರಡನೇ ಘಟನೆ ಇದು. ಎಪ್ರಿಲ್ನಲ್ಲಿ, ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಲಾಕ್ ಮಾಡಲಾದ ಕಾರಿನಲ್ಲಿ ಸಿಲುಕಿಕೊಂಡು ಇಬ್ಬರು ಬಾಲಕಿಯರು ಉಸಿರುಗಟ್ಟಿ ಮೃತಪಟ್ಟಿದ್ದರು.







