ಮಹಾರಾಷ್ಟ್ರ | ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ನೀರಿನಲ್ಲಿ ಮುಳುಗಿ ನಾಲ್ವರು ಮೃತ್ಯು, 13 ಮಂದಿ ನಾಪತ್ತೆ

Credit: PTI Photo
ಮುಂಬೈ, ಸೆ. 7: ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಗಣೇಶನ ಮೂರ್ತಿ ವಿಸರ್ಜನೆ ಸಂದರ್ಭ ಕನಿಷ್ಠ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇತರ 13 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಪುಣೆ ಜಿಲ್ಲೆಯ ಚಾಕನ್ ಪ್ರದೇಶದಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ‘‘ವಾಕಿ ಖುರ್ದ್ನಲ್ಲಿ ಇಬ್ಬರು ಹಾಗೂ ಶೆಲ್ ಪಿಂಪಲ್ಗಾಂವ್ನಲ್ಲಿ ಒಬ್ಬರು ಭಾಮಾ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಮತ್ತೊಬ್ಬರು ಪುಣೆ ಗ್ರಾಮೀಣ ಪ್ರದೇಶದ ಬಿರ್ವಾಡಿಯಲ್ಲಿ ಬಾವಿಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಇವರ ಪೈಕಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಇನ್ನಿಬ್ಬರ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಂದೇಡ್ ಜಿಲ್ಲೆಯ ಗಾಡೇಗಾಂವ್ನ ನದಿಯಲ್ಲಿ ಮೂವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರಲ್ಲಿ ಒಬ್ಬರನ್ನು ಅನಂತರ ರಕ್ಷಿಸಲಾಗಿದೆ. ಇತರ ಇಬ್ಬರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ರೀತಿಯ ಘಟನೆಗಳು ನಾಸಿಕ್, ಜಲಗಾಂವ್, ಥಾಣೆ ಹಾಗೂ ಅಮರಾವತಿಯಲ್ಲೂ ವರದಿಯಾಗಿವೆ.
ನಾಸಿಕ್ನಲ್ಲಿ ಗಣೇಶನ ವಿಗ್ರಹ ವಿಸರ್ಜನೆ ಸಂದರ್ಭ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ. ಅವರಲ್ಲಿ ಒಬ್ಬರ ಮೃತದೇಹ ಸಿನ್ನಾರ್ನಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಲಗಾಂವ್ನಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಮೂವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರನ್ನು ಪತ್ತೆ ಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ಥಾಣೆ ಜಿಲ್ಲೆಯಲ್ಲಿ ಮೂವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರಲ್ಲಿ ಒಬ್ಬರ ಮೃತದೇಹ ಇದುವರೆಗೆ ಪತ್ತೆಯಾಗಿದೆ. ಅಮರಾವತಿಯಲ್ಲಿ ಗಣೇಶನ ಮೂರ್ತಿಯ ವಿಸರ್ಜನೆ ಸಂದರ್ಭ ಓರ್ವ ಮುಳುಗಿ ಮೃತಪಟ್ಟಿದ್ದಾನೆ ಎಂದು ಭೀತಿಪಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ನಡುವೆ ನದಿಗಳು ಹಾಗೂ ನೀರಿನಾಗರಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್ಡಿಆರ್ಎಫ್) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಎಂದು ಅಧಿಕಾರಿಗಳು ತಿಳಿಸಿದ್ದಾರೆ.







