ಅದಾನಿ ಕುರಿತು ‘ಮಾನಹಾನಿಕರ’ ವರದಿಗಳನ್ನು ಪ್ರಕಟಿಸುವುದಕ್ಕೆ ನಾಲ್ವರು ಪತ್ರಕರ್ತರಿಗೆ ನಿರ್ಬಂಧ; ಆದೇಶ ರದ್ದುಗೊಳಿಸಿದ ದಿಲ್ಲಿ ನ್ಯಾಯಾಲಯ

ಗೌತಮ್ ಅದಾನಿ | PTI
ಸುಕ್ಮಾ: ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಅದಾನಿ ಎಂಟರ್ಪ್ರೈಸಸ್ ಕುರಿತು ಮಾನಹಾನಿಕರ ಎನ್ನಲಾದ ಲೇಖನಗಳನ್ನು ಪ್ರಕಟಿಸದಂತೆ ನಿರ್ಬಂಧ ವಿಧಿಸಿ ನಾಲ್ವರು ಪತ್ರಕರ್ತರಿಗೆ ಕೆಳ ನ್ಯಾಯಾಲಯ ನೀಡಿದ ಆದೇಶವನ್ನು ದಿಲ್ಲಿ ನ್ಯಾಯಾಲಯ ಗುರುವಾರ ರದ್ದುಗೊಳಿಸಿದೆ.
ಸೆಪ್ಟಂಬರ್ 6ರಂದು ರೋಹಿಣಿ ನ್ಯಾಯಾಲಯದ ವಿಶೇಷ ಸಿವಿಲ್ ನ್ಯಾಯಾಧೀಶ ಅನುಜ್ ಕುಮಾರ್ ಸಿಂಗ್ ಅದಾನಿ ಸಮೂಹದ ಪ್ರಮುಖ ಕಂಪೆನಿ ಕುರಿತು ಮಾನ ಹಾನಿಕರ ಎನ್ನಲಾದ ವರದಿಗಳನ್ನು ಪ್ರಕಟಿಸಿದ ಪತ್ರಕರ್ತರಾದ ಪರಂಜಾಯ್ ಗುಹಾ ಠಾಕುರತಾ, ರವಿ ನಾಯರ್, ಅಬಿರ್ ದಾಸ್ಗುಪ್ತಾ, ಅಯಸ್ಕಾಂತ್ ದಾಸ್, ಆಯುಷ್ ಜೋಷಿ ಹಾಗೂ ವೆಬ್ಸೈಟ್ಗಳಾದ paranjoy.in, adaniwatch.org, adanifiles.com.auಗೆ ತಾತ್ಕಾಲಿಕ ನಿರ್ಬಂಧ ವಿಧಿಸಿತ್ತು.
ನಾಯರ್, ದಾಸ್ಗುಪ್ತಾ, ದಾಸ್ ಹಾಗೂ ಜೋಷಿ ಸಲ್ಲಿಸಿದ ಮೇಲ್ಮನವಿಯ ಕುರಿತು ರೋಹಿಣಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಆಶಿಶ್ ಅಗರ್ವಾಲ್ ಅವರು ಗುರುವಾರ ಈ ಆದೇಶ ನೀಡಿದರು.
ಇದಕ್ಕಿಂತ ಮುನ್ನ ಗ್ಯಾಗ್ ಆದೇಶದ ವಿರುದ್ಧ ಠಾಕುರತಾ ಅವರು ಸಲ್ಲಿಸಿದ ಅರ್ಜಿಯ ಮೇಲಿನ ತನ್ನ ತೀರ್ಪನ್ನು ನ್ಯಾಯಾಲಯದ ಇನ್ನೊಬ್ಬರು ನ್ಯಾಯಾಧೀಶರು ಕಾಯ್ದಿರಿಸಿದರು.
ಈ ಲೇಖನಗಳು ದೀರ್ಘ ಕಾಲದಿಂದ ಸಾರ್ವಜನಿಕ ವಲಯದಲ್ಲಿವೆ. ಆದುದರಿಂದ ಅವುಗಳನ್ನು ತೆಗೆದು ಹಾಕುವಂತೆ ನಿರ್ದೇಶಿಸುವುದಕ್ಕಿಂತ ಮುನ್ನ ಸಿವಿಲ್ ನ್ಯಾಯಾಧೀಶರು ಪತ್ರಕರ್ತರ ವಾದವನ್ನು ಆಲಿಸಬೇಕಿತ್ತು ಎಂದು ಅಗರ್ವಾಲ್ ಅಭಿಪ್ರಾಯಿಸಿದರು.
ಪತ್ರಕರ್ತರ ವಾದವನ್ನು ಆಲಿಸಿದ ಬಳಿಕ ಅವುಗಳು ಮಾನಹಾನಿಕರವಲ್ಲ ಎಂದು ನ್ಯಾಯಾಲಯಕ್ಕೆ ತಿಳಿದರೆ, ತೆಗೆದು ಹಾಕಲಾದ ಲೇಖನಗಳನ್ನು ಮತ್ತೆ ಹಾಕಲು ಸಾಧ್ಯವಾಗದೇ ಇರಬಹುದು ಎಂದು ನ್ಯಾಯಮೂರ್ತಿಗಳು ಹೇಳಿದರು.
ಆದುದರಿಂದ ನನ್ನ ಅಭಿಪ್ರಾಯದಲ್ಲಿ, ವಿಚಾರಣಾ ನ್ಯಾಯಾಲಯ ಪ್ರತಿವಾದಿಗಳ ವಾದಕ್ಕೆ ಅವಕಾಶವನ್ನು ನೀಡಿದ ಬಳಿಕ ವಾದಿ ಮಾಡಿದ ಮನವಿಯನ್ನು ನಿರ್ಧರಿಸಬೇಕು ಎಂದಿದ್ದಾರೆ.







