ಉತ್ತರ ಪ್ರದೇಶ |ನದಿಯಲ್ಲಿ ಮುಳುಗಿ ನಾಲ್ವರು ಸಹೋದರಿಯರ ಮೃತ್ಯು ಪ್ರಕರಣ : ಕುಟುಂಬದ ಸದಸ್ಯರಿಗೆ ಪರಿಹಾರ ಧನ ವಂಚಿಸಿದ ಗ್ರಾಮ ಮುಖ್ಯಸ್ಥ

ಸಾಂದರ್ಭಿಕ ಚಿತ್ರ
ಬಲರಾಂಪುರ : ನದಿಯಲ್ಲಿ ಮುಳುಗಿ ಮೃತಪಟ್ಟಿದ್ದ ನಾಲ್ವರು ಸಹೋದರಿಯರ ಪರವಾಗಿ ಅವರ ಕುಟುಂಬದ ಸದಸ್ಯರಿಗೆ ಬಂದಿದ್ದ 6 ಲಕ್ಷ ರೂ. ಪರಿಹಾರ ಧನವನ್ನು ವಂಚಿಸಿದ ಆರೋಪದ ಮೇಲೆ ಗ್ರಾಮ ಮುಖ್ಯಸ್ಥನ ವಿರುದ್ಧ ಜಿಲ್ಲಾಡಳಿತವು ವಂಚನೆ ಪ್ರಕರಣವನ್ನು ದಾಖಲಿಸಿದೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 18ರಂದು ಕಾಲು ಬಂಕತ್ ಗ್ರಾಮದಲ್ಲಿರುವ ಕ್ವಾನೊ ನದಿಯಲ್ಲಿ ಸ್ನಾನ ಮಾಡುವಾಗ ನೀರಿನ ಸೆಳೆತಕ್ಕೆ ಸಿಲುಕಿ ರೇಷ್ಮಾ (13), ಅಫ್ಸಾನಾ (11), ಗುಡ್ಡಿ (9) ಹಾಗೂ ಲಲ್ಲಿ (7) ಎಂಬ ನಾಲ್ವರು ಸಹೋದರಿಯರು ಮೃತಪಟ್ಟಿದ್ದರು.
ಜುಲೈ 16ರಂದು ರಾಜ್ಯ ಸರಕಾರವು ಪರಿಹಾರ ಇಲಾಖೆಯ ಮೂಲಕ ಮೃತ ಸಂತ್ರಸ್ತರ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗೆ 16 ಲಕ್ಷ ರೂ. ಪರಿಹಾರ ಮೊತ್ತವನ್ನು ಜಮೆ ಮಾಡಿತ್ತು ಎಂದು ಹೇಳಲಾಗಿದೆ.
ಕೆಲ ದಿನಗಳ ನಂತರ, ಹಿರಿಯ ಅಧಿಕಾರಿಗಳಿಗೆ ಲಂಚ ನೀಡಬೇಕು ಎಂಬ ಸೋಗಿನಲ್ಲಿ ಗ್ರಾಮ ಮುಖ್ಯಸ್ಥ ಜಬೀರ್ ಆ ಕುಟುಂಬದ ಸದಸ್ಯರಿಂದ ಪರಿಹಾರ ಮೊತ್ತದ ಪೈಕಿ 6 ಲಕ್ಷ ರೂ. ಅನ್ನು ಪಡೆದಿದ್ದ ಎನ್ನಲಾಗಿದೆ. ಇದಾದ ನಂತರ, ಮೃತ ಸಹೋದರಿಯರ ತಾಯಿ ಶುಕ್ರವಾರ ಜಬೀರ್ ವಿರುದ್ಧ ದೂರು ದಾಖಲಿಸಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಶನಿವಾರ ಪ್ರತಿಕ್ರಿಯಿಸಿರುವ ಜಿಲ್ಲಾ ದಂಡಾಧಿಕಾರಿ ಪವನ್ ಅಗರ್ವಾಲ್, “ಮಹಿಳೆಯು ನೀಡಿರುವ ದೂರಿನ ಕುರಿತು ತನಿಖೆ ನಡೆಸಲಾಗಿದ್ದು, ಗ್ರಾಮ ಮುಖ್ಯಸ್ಥ ಜಬೀರ್ ಮೃತ ಸಹೋದರಿಯರ ಕುಟುಂಬದ ಸದಸ್ಯರಿಂದ ವಂಚಕ ಮಾರ್ಗದಲ್ಲಿ 6 ಲಕ್ಷ ರೂ. ಪರಿಹಾರ ಮೊತ್ತವನ್ನು ಪಡೆದುಕೊಂಡಿದ್ದಾನೆ ಎಂಬುದು ಸಾಬೀತಾಗಿದೆ” ಎಂದು ತಿಳಿಸಿದ್ದಾರೆ.







