ಪತ್ರಿಕೋದ್ಯಮದ ನಾಲ್ಕು 'Wʼ ಗಳನ್ನು ಈಗ 'D' ಯಿಂದ ಬದಲಾಯಿಸಲಾಗಿದೆ: ಕೇರಳ ಹೈಕೋರ್ಟ್ ಹೇಳಿದ್ದೇನು?

Photo: PTI
ತಿರುವನಂತಪುರಂ: ನಿಖರ ಮತ್ತು ಸಮಗ್ರ ಸುದ್ದಿ ವರದಿ ಮಾಡಲು ಪತ್ರಕರ್ತರಿಗೆ ಮಾರ್ಗಸೂಚಿಯಾಗಬೇಕಿದ್ದ ವಾಸ್ತವಿಕ ಚೌಕಟ್ಟು ಈಗ ಮರೆಯಾಗಿದೆ ಎಂದು ಕೇರಳ ಹೈಕೋರ್ಟ್ ಹೇಳಿದೆ.
ಪತ್ರಿಕೋದ್ಯಮಕ್ಕೆ ಮಾರ್ಗಸೂಚಿಯಾಗಿದ್ದ ನಾಲ್ಕು W ಗಳಾದ Who, What, When, Where (ಯಾರು, ಏನು, ಯಾವಾಗ, ಎಲ್ಲಿ) ಇವುಗಳನ್ನು ಈಗ ನಾಲ್ಕು D ಗಳು- Defame, Denigrate, Damnify, Destroy (ಮಾನಹಾನಿಗೊಳಿಸು, ಅವಮಾನಿಸು, ಖಂಡಿಸು, ನಾಶಪಡಿಸು) ಇವುಗಳಿಂದ ಬದಲಾಯಿಸಲಾಗಿದೆ ಎಂದು ಕೇರಳ ಹೈಕೋರ್ಟಿನ ನ್ಯಾಯಮೂರ್ತಿಗಳಾದ ವಿ ಜಿ ಅರುಣ್ ಹೇಳಿದರು.
“ಪತ್ರಕರ್ತರಿಗೆ ವರದಿಗಾರಿಕೆ ವೇಳೆ ಮಾರ್ಗದರ್ಶನ ನೀಡುವ ನಾಲ್ಕು W ಗಳು ನಿಖರತೆ ಮತ್ತು ಸಮಗ್ರತೆಗೆ ಸಹಕಾರಿ. ಈ ನಾಲ್ಕು W ಹಾಗೂ ಐದನೇ W- Why (ಏಕೆ) ಮಾಹಿತಿ ಕಲೆ ಹಾಕುವಲ್ಲಿ ಪತ್ರಕರ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತವೆ. ಆದರೆ ಇಲ್ಲಿ ಉಲ್ಲೇಖಿಸಲಾಗಿರುವಂತಹ ವೀಡಿಯೋಗಳು, ಈ W ಗಳನ್ನು D ಗಳಿಂದ ಬದಲಾಯಿಸಲಾಗಿವೆಯೇ ಎಂದು ಯೋಚಿಸುವಂತೆ ಮಾಡಿವೆ,” ಎಂದು ನ್ಯಾಯಾಲಯ ಹೇಳಿದೆ.
ಮಲಯಾಳಂ ಯುಟ್ಯೂಬ್ ವಾಹಿನಿ ಮರುನಾಡನ್ ಮಲಯಾಳಿಯಲ್ಲಿ ಅದರ ಸಂಪಾದಕ ಶಾಜನ್ ಸಕಾರಿಯಾ ಅವರು ಪ್ರಕಟಿಸಿದ ಒಂದು ಸುದ್ದಿ ಕುರಿತಂತೆ ನ್ಯಾಯಾಲಯ ಮೇಲಿನಂತೆ ಹೇಳಿದೆ. ಈ ಯುಟ್ಯೂಬ್ ವಾಹಿನಿ ಪ್ರಕಟಿಸಿದ ಸುದ್ದಿಯಲ್ಲಿ ಶಾಸಕ ಪಿ ವಿ ಶ್ರೀನಿಜಿನ್ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಲಾಗಿತ್ತು.
ಈ ಸುದ್ದಿ ಪ್ರಕಟಗೊಂಡ ನಂತರ ಸಕಾರಿಯ ವಿರುದ್ಧ ಪರಿಶಿಷ್ಟ ಜಾತಿ/ಪಂಗಡಗಳ ದೌರ್ಜನ್ಯ ನಿಗ್ರಹ ಕಾಯಿದೆ ಹಾಗೂ ಕೇರಳ ಪೊಲೀಸ್ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಸಂಪಾದಕನಾಗಿ ಆವರು ಸುಳ್ಳು, ಆಧಾರರಹಿತ ಹಾಗೂ ಮಾನಹಾನಿಕರ ಆರೋಪಗಳನ್ನು ಶಾಸಕರ ವಿರುದ್ಧ ಮಾಡಿದ್ದಾರೆಂಬ ಆರೋಪವಿದೆ.
ತಾವು ಶಾಸಕರ ವಿರುದ್ಧ ವೀಡಿಯೋ ಪ್ರಸಾರ ಮಾಡಿದ್ದನ್ನು ಅವರು ಒಪ್ಪಿಕೊಂಡರೂ ಶಾಸಕರನ್ನು ಅವಮಾನಿಸುವ ಉದ್ದೇಶವಿರಲಿಲ್ಲ. ಸಂಶೋಧನೆಯಿಂದ ಹಾಗೂ ಮೂಲಗಳಿಂದ ದೊರತೆ ಮಾಹಿತಿಯ ಆಧಾರದಲ್ಲಿ ಸುದ್ದಿ ಪ್ರಕಟಿಸಲಾಗಿತ್ತು., ಕ್ರಿಮಿನಲ್ ಪ್ರಕರಣ ದಾಖಲಾದ ನಂತರ ವೀಡಿಯೋವನ್ನು ತೆಗೆದುಹಾಕಿರುವುದಾಗಿಯೂ ಅವರು ತಿಳಿಸಿದ್ದರು.
ನಿರೀಕ್ಷಣಾ ಜಾಮೀನು ಕೋರಿ ಸಕಾರಿಯಾ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ಜೂನ್ 16 ರಂದು ವಜಾಗೊಳಿಸಿತ್ತು. ಇದನ್ನು ಅವರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರೆ ಕಳೆದ ಶುಕ್ರವಾರದ ತೀರ್ಪಿನಲ್ಲಿ ಹೈಕೋರ್ಟ್ ಕೂಡ ಅವರ ಅಪೀಲನ್ನು ತಿರಸ್ಕರಿಸಿದೆ ಹಾಗೂ ಹೊರನೋಟಕ್ಕೆ ಅವರು ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿದು ಬರುತ್ತದೆ ಎಂದು ಹೇಳಿದ್ದಾರೆ.







