ಮಾರ್ಚ್ ಮೊದಲ ವಾರದಲ್ಲಿ ಶೇರುಪೇಟೆಯಿಂದ 24,753 ಕೋಟಿ ರೂ.ಹಿಂಪಡೆದ ಎಫ್ಪಿಐಗಳು

ಭಾರತೀಯ ಶೇರು ಮಾರುಕಟ್ಟೆ | PTI
ಹೊಸದಿಲ್ಲಿ: ಉಲ್ಬಣಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ ಮತ್ತು ನೀರಸ ಕಾರ್ಪೊರೇಟ್ ಗಳಿಕೆಗಳ ನಡುವೆ ವಿದೇಶಿ ಹೂಡಿಕೆದಾರರು ಭಾರತೀಯ ಶೇರು ಮಾರುಕಟ್ಟೆಯಿಂದ ಹಣ ಹಿಂದೆಗೆತವನ್ನು ಮುಂದುವರಿಸಿದ್ದು,ಮಾರ್ಚ್ ತಿಂಗಳ ಮೊದಲ ವಾರದಲ್ಲಿ 24,753 ಕೋಟಿ ರೂ.ಗಳ ಹೂಡಿಕೆಯನ್ನು ವಾಪಸ್ ಪಡೆದಿದ್ದಾರೆ.
ವಿದೇಶಿ ಬಂಡವಾಳ ಹೂಡಿಕೆದಾರ(ಎಫ್ಪಿಐ)ರು ಫೆಬ್ರವರಿಯಲ್ಲಿ 34,754 ಕೋಟಿ ರೂ. ಮತ್ತು ಜನವರಿಯಲ್ಲಿ 78,027 ಕೋಟಿ ರೂ.ಗಳನ್ನು ವಾಪಸ್ ಪಡೆದಿದ್ದರು.
2025ರಲ್ಲಿ ಈವರೆಗೆ ಎಫ್ಪಿಐಗಳು ಶೇರು ಪೇಟೆಯಿಂದ ಹಿಂಪಡೆದಿರುವ ಒಟ್ಟು ಮೊತ್ತ 1.37 ಲ.ಕೋಟಿ ರೂಗೆ ತಲುಪಿದೆ.
ಈ ತಿಂಗಳಲ್ಲಿ ಮಾ.7ರವರೆಗೆ ಎಫ್ಪಿಐಗಳು 24,753 ಕೋಟಿ ರೂ.ಗಳ ಭಾರತೀಯ ಶೇರುಗಳನ್ನು ಮಾರಾಟ ಮಾಡಿದ್ದಾರೆ. ಡಿ.13,2024ರಿಂದ ಎಫ್ಪಿಐಗಳು ಒಟ್ಟು 17.1 ಶತಕೋಟಿ ಅಮೆರಿಕನ್ ಡಾ.ಮೌಲ್ಯದ ಶೇರುಗಳನ್ನು ಮಾರಾಟ ಮಾಡಿದ್ದಾರೆ. ಎಫ್ಪಿಐಗಳಿಂದ ಶೇರುಗಳ ಮಾರಾಟದ ಭರಾಟೆ ನಿರಂತರ 13ನೇ ವಾರಕ್ಕೂ ಮುಂದುವರಿದಿದೆ.
ಜಾಗತಿಕ ಮತ್ತು ದೇಶಿಯ ಅಂಶಗಳು ವಿದೇಶಿ ಹೂಡಿಕೆದಾರರಿಂದ ಸತತ ಮಾರಾಟಕ್ಕೆ ಕಾರಣವಾಗಿವೆ.
ಜಾಗತಿಕ ವ್ಯಾಪಾರ ಉದ್ವಿಗ್ನತೆ ಉಲ್ಬಣಗೊಂಡಿದ್ದು,ಇದು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ಮೆಕ್ಸಿಕೊ,ಕೆನಡಾ ಮತ್ತು ಚೀನಾದಂತಹ ದೇಶಗಳ ಮೇಲೆ ಅಮೆರಿಕದಿಂದ ಹೆಚ್ಚು ಸುಂಕ ಹೇರಿಕೆ ಮತ್ತು ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳು ಅದರ ಮೇಲೆ ಪ್ರತಿಸುಂಕವನ್ನು ವಿಧಿಸಿರುವುದು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಿದೆ ಎಂದು ಮಾರ್ನಿಂಗ್ ಸ್ಟಾರ್ ಇನ್ವೆಸ್ಟ್ಮೆಂಟ್ನ ಸಹ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಅಭಿಪ್ರಾಯಿಸಿದ್ದಾರೆ.







