ಅಯೋಧ್ಯೆಯ ರಾಮಮಂದಿರ ಟ್ರಸ್ಟ್ ಹೆಸರಿನಲ್ಲಿ ನಕಲಿ ಕ್ಯೂಆರ್ ಕೋಡ್ ಮೂಲಕ ವಂಚನೆ ; ಭಕ್ತರಿಗೆ ವಿಹಿಂಪ ಎಚ್ಚರಿಕೆ
ಅಯೋಧ್ಯೆಯ ರಾಮಮಂದಿರ | PTI
ಅಯೋಧ್ಯೆ: ಇಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ದಿನಗಣನೆ ಆರಂಭವಾಗಿರುವ ನಡುವೆಯೇ ಮಂದಿರಕ್ಕೆ ದೇಣಿಗೆಗಳನ್ನು ಕೋರುವ ನೆಪದಲ್ಲಿ ಭಕ್ತರನ್ನು ಲೂಟಿ ಮಾಡಲು ಹಗರಣವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ನೀಡಿರುವ ವಿಹಿಂಪ ವಕ್ತಾರ ವಿನೋದ ಬನ್ಸಾಲ್ ಅವರು, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಹೆಸರಿನಲ್ಲಿ ನಕಲಿ ಐಡಿಯನ್ನು ಸೃಷ್ಟಿಸುವ ಮೂಲಕ ಜನರನ್ನು ವಂಚಿಸಲು ಯತ್ನಿಸುತ್ತಿರುವ ಸೈಬರ್ ಕ್ರಿಮಿನಲ್ ಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಅಭಿಷೇಕ್ ಕುಮಾರ್ ಎಂಬಾತ ಸಾಮಾಜಿಕ ಮಾಧ್ಯಮಗಳಲ್ಲಿ ಕ್ಯೂಆರ್ ಕೋಡ್ ಹರಿಬಿಡುವ ಮೂಲಕ ರಾಮಮಂದಿರ ಅಭಿವೃದ್ಧಿಗೆ ದೇಣಿಗೆಗಳನ್ನು ಕೋರುತ್ತಿದ್ದಾನೆ. ಈ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಿದರೆ ಅದು ಮನೀಷಾ ನಲ್ಲಾಬೆಲ್ಲಿ ಎಂಬ ಹೆಸರಿನ ಯುಪಿಐ ಖಾತೆಗೆ ಜಮೆಯಾಗುತ್ತದೆ ಎಂದು ಬನ್ಸಾಲ್ ದೂರಿನಲ್ಲಿ ತಿಳಿಸಿದ್ದಾರೆ.
ಬನ್ಸಾಲ್ ಈ ಬಗ್ಗೆ ಕೇಂದ್ರ ಗೃಹಸಚಿವಾಲಯ ಹಾಗೂ ದಿಲ್ಲಿ ಮತ್ತು ಉತ್ತರ ಪ್ರದೇಶ ಪೋಲಿಸ್ ಮುಖ್ಯಸ್ಥರಿಗೆ ಮಾಹಿತಿಯನ್ನು ನೀಡಿದ್ದಾರೆ.
ದೇವಸ್ಥಾನಕ್ಕಾಗಿ ಹಣವನ್ನು ಸಂಗ್ರಹಿಸಲು ಯಾವುದೇ ಖಾಸಗಿ ವ್ಯಕ್ತಿಗೆ ಅಥವಾ ವ್ಯಕ್ತಿಗಳಿಗೆ ಅಧಿಕಾರವನ್ನು ನೀಡಿಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಲವಾರು ಬಾರಿ ಸ್ಪಷ್ಟಪಡಿಸಿದೆ. ರಾಮಮಂದಿರ ಉದ್ಘಾಟನೆಯ ಬಗ್ಗೆ ಇಡೀ ದೇಶವೇ ಸಂಭ್ರಮದಲ್ಲಿರುವಾಗ ಇಂತಹ ದುಷ್ಟಚಟುವಟಿಕೆಗಳನ್ನು ಆರಂಭದಲ್ಲಿಯೇ ಮಟ್ಟ ಹಾಕಬೇಕಿದೆ ಎಂದು ಬನ್ಸಾಲ್ ದೂರು ಪತ್ರದಲ್ಲಿ ಹೇಳಿದ್ದಾರೆ.
ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನಾ ವಿಧಿಗಳು ಜ.16ರಿಂದ ಆರಂಭಗೊಳ್ಳಲಿದ್ದು, ಜ.22ರಂದು ಪ್ರಧಾನಿ ನರೇಂದ್ರ ಮೋದಿಯವರು ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.