96 ವರ್ಷದ ಸ್ವಾತಂತ್ರ್ಯ ಹೋರಾಟಗಾರನಿಗೆ 40 ವರ್ಷ ಪಿಂಚಣಿ ನಿರಾಕರಣೆ: ಕೇಂದ್ರ ಸರಕಾರಕ್ಕೆ 20,000 ರೂ. ದಂಡ ವಿಧಿಸಿದ ದಿಲ್ಲಿ ಹೈಕೋರ್ಟ್

Photo: PTI
ಹೊಸದಿಲ್ಲಿ: 96 ವರ್ಷ ಪ್ರಾಯದ ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಗೆ ಪಿಂಚಣಿ ನೀಡುವಲ್ಲಿ ‘‘ದಿವ್ಯ ನಿರ್ಲಕ್ಷ್ಯ ತೋರಿಸಿರುವುದಕ್ಕಾಗಿ’’ ಮತ್ತು ಅವರನ್ನು 40 ವರ್ಷಗಳ ಕಾಲ ಕಾಯುವಂತೆ ಮಾಡಿರುವುದಕ್ಕಾಗಿ ದಿಲ್ಲಿ ಹೈಕೋರ್ಟ್ ಇತ್ತೀಚೆಗೆ ಕೇಂದ್ರ ಸರಕಾರಕ್ಕೆ 20,000 ರೂ. ದಂಡ ವಿಧಿಸಿದೆ.
ಸ್ವಾತಂತ್ರ್ಯ ಹೋರಾಟಗಾರ ಉತ್ತಮ್ ಲಾಲ್ ಸಿಂಗ್ರ ಅರ್ಜಿಯನ್ನು ಇತ್ಯರ್ಥಪಡಿಸಿದ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್, ಸರಕಾರದ ಕಾರ್ಯವೈಖರಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಅರ್ಜಿದಾರರ ಮೊಕದ್ದಮೆಯ ವೆಚ್ಚವನ್ನು ಅವರಿಗೆ ಆರು ವಾರಗಳಲ್ಲಿ ಪಾವತಿಸುವಂತೆಯೂ ನ್ಯಾಯಾಧೀಶರು ಸರಕಾರಕ್ಕೆ ಆದೇಶಿಸಿದರು.
ಅದೂ ಅಲ್ಲದೆ, ಸಿಂಗ್ಗೆ 1980ರಿಂದ ಸ್ವತಂತ್ರತಾ ಸೈನಿಕ್ ಸಮ್ಮಾನ್ ಪಿಂಚಣಿಯನ್ನು ವರ್ಷಕ್ಕೆ 6 ಶೇಕಡ ಬಡ್ಡಿಯೊಂದಿಗೆ 12 ವಾರಗಳಲ್ಲಿ ಬಿಡುಗಡೆಗೊಳಿಸುವಂತೆಯೂ ನ್ಯಾಯಾಲಯ ಆದೇಶಿಸಿತು.
‘‘ದೇಶಕ್ಕೆ ಸ್ವಾತಂತ್ರ್ಯ ಗಳಿಸಿ ಕೊಡುವುದಕ್ಕಾಗಿ ತಮ್ಮ ಬೆವರು ಮತ್ತು ನೆತ್ತರು ಹರಿಸಿದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಲು ಭಾರತ ಸರಕಾರವು ಸ್ವತಂತ್ರತಾ ಸೈನಿಕ್ ಸಮ್ಮಾನ್ ಪಿಂಚಣಿಯನ್ನು ಘೋಷಿಸಿತ್ತು. ತನಗೆ ನ್ಯಾಯವಾಗಿ ಸಿಗಬೇಕಾದ ಪಿಂಚಣಿಯನ್ನು ಪಡೆಯಲು 96 ವರ್ಷದ ಸ್ವಾತಂತ್ರ್ಯ ಹೋರಾಟಗಾರನನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸಲಾಯಿತು’’ ಎಂದು ತನ್ನ ನವೆಂಬರ್ 2ರ ತೀರ್ಪಿನಲ್ಲಿ ನ್ಯಾ. ಪ್ರಸಾದ್ ಹೇಳಿದ್ದಾರೆ.
ಉತ್ತಮ್ ಲಾಲ್ ಸಿಂಗ್ ಕ್ವಿಟ್ ಇಂಡಿಯಾ ಚಳವಳಿ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಇತರ ಚಳವಳಿಗಳಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ.







