ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಲು ಒಪ್ಪಿದ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್
ಇಮ್ಯಾನುವೆಲ್ ಮ್ಯಾಕ್ರೋನ್ | Photo: PTI
ಹೊಸದಿಲ್ಲಿ: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಅವರು 2024ರ ಜ.26ರಂದು ನಡಯಲಿರುವ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಆಹ್ವಾನಕ್ಕಾಗಿ ಮೋದಿಯವರಿಗೆ ಧನ್ಯವಾದಗಳನ್ನು ಸಲ್ಲಿಸಿರುವ ಮ್ಯಾಕ್ರೋನ್ ‘ಪ್ರಿಯ ಸ್ನೇಹಿತ, ನಿಮ್ಮೊಂದಿಗೆ ಸಂಭ್ರಮಾಚರಣೆಗೆ ನಾನು ಭಾರತದಲ್ಲಿರುತ್ತೇನೆ’ ಎಂದು ಹೇಳಿದ್ದಾರೆ.
ಭಾರತ ಸರಕಾರವು ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಅಧ್ಯಕ್ಷ ಜೋ ಬೈಡೆನ್ ರನ್ನು ಆಹ್ವಾನಿಸಿದೆ ಎಂದು ಭಾರತದಲ್ಲಿ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಕಳೆದ ಸೆಪ್ಟಂಬರ್ ನಲ್ಲಿ ತಿಳಿಸಿದ್ದರು. ಆದರೆ ಬೈಡೆನ್ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಲು ತನ್ನ ಅಸಾಮರ್ಥ್ಯವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಗಣರಾಜ್ಯ ದಿನದ ಸಂದರ್ಭದಲ್ಲಿ ನಡೆಯಲಿದ್ದ ಕ್ವಾಡ್ ಶೃಂಗಸಭೆಯನ್ನು ಮುಂದೂಡಲಾಗಿತ್ತು.
ಕಳೆದ ವರ್ಷದ ಗಣರಾಜ್ಯೋತ್ಸವದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್-ಸಿಸಿ ಅವರು ಮುಖ್ಯ ಅತಿಥಿಯಾಗಿದ್ದರು.
ಮ್ಯಾಕ್ರೋನ್ ಅವರು ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಆರನೇ ಫ್ರೆಂಚ್ ನಾಯಕರಾಗಿದ್ದಾರೆ. ಮಾಜಿ ಫ್ರೆಂಚ್ ಪ್ರಧಾನಿ ಜಾಕಸ್ ಶಿರಾಕ್ ಅವರು 1976 ಮತ್ತು 1998ರಲ್ಲಿ,ಮಾಜಿ ಫ್ರೆಂಚ್ ಅಧ್ಯಕ್ಷರಾದ ವ್ಯಾಲೆರಿ ಗಿಸ್ಕಾರ್ಡ್ ಡಿ ಎಸ್ಟೇಂಗ್,ನಿಕೋಲಸ್ ಸರ್ಕೋಝಿ ಮತ್ತು ಫ್ರಾಂಕೋಯಿಸ್ ಹೊಲಾಂಡ್ ಅವರು ಅನುಕ್ರಮವಾಗಿ 1980,2008 ಮತ್ತು 2016ರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಜುಲೈನಲ್ಲಿ ಫ್ರಾನ್ಸ್ ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಬ್ಯಾಸ್ಟಿಲ್ ದಿನಾಚರಣೆ (ಫ್ರೆಂಚ್ ರಾಷ್ಟ್ರೀಯ ದಿನ)ಯಲ್ಲಿ ಗೌರವ ಅಥಿತಿಯಾಗಿ ಭಾಗವಹಿಸಿದ್ದರು.
ಸೆಪ್ಟಂಬರ್ ನಲ್ಲಿ ಜಿ20 ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡಿದ್ದ ಮ್ಯಾಕ್ರೋನಿ ಮೋದಿಯವರೊಂದಿಗೆ ಮಾತುಕತೆಗಳನ್ನು ನಡೆಸಿದ್ದರು.