ಸ್ಟಾಕ್ ಬ್ರೋಕರ್ ನಿಂದ ಗುಜರಾತ್ ಸಿಎಂ ವರೆಗೆ; ʼವಿಜಯ್ʼ ರೂಪಾನಿ
2014ರಲ್ಲಿ ಶಾಸಕರಾಗಿ ಆಯ್ಕೆಯಾದ ರೂಪಾನಿಗೆ 2016ರಲ್ಲಿ ಸಿಎಂ ಪಟ್ಟ

PC : PTI
ಅಹ್ಮದಾಬಾದ್: ಗುಜರಾತ್ ನ ಅಹ್ಮದಾಬಾದ್ ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ AI 171 ನಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮೃತಪಟ್ಟಿದ್ದಾರೆ. ಬೋಯಿಂಗ್ 787 ಡ್ರೀಮ್ಲೈನರ್ ಏರ್ ಇಂಡಿಯಾ ವಿಮಾನವು ಜೂನ್ 12, 2025 ರಂದು ಮಧ್ಯಾಹ್ನ 1:38 ಕ್ಕೆ ಅಹಮದಾಬಾದ್ ನಿಂದ ಹೊರಟ ಸ್ವಲ್ಪ ಸಮಯದ ನಂತರ ಮೇಘನಿ ನಗರದ ವಸತಿ ಪ್ರದೇಶದಲ್ಲಿ ಅಪ್ಪಳಿಸಿತು.
ಲಂಡನ್ ಗೆ ಹೊರಟಿದ್ದ ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ಪ್ರಯಾಣಿಕರ ಪೈಕಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳು ಇದ್ದರು.
ಮಾಜಿ ಸಿಎಂ ವಿಜಯ್ ರೂಪಾನಿ ಕಳೆದ ಆರು ತಿಂಗಳಿನಿಂದ ಲಂಡನ್ ನಲ್ಲಿದ್ದ ತಮ್ಮ ಪತ್ನಿಯನ್ನು ಕರೆತರಲು ಏರ್ ಇಂಡಿಯಾ ವಿಮಾನದಲ್ಲಿ ತೆರಳುತ್ತಿದ್ದರು. 1956 ಆಗಸ್ಟ್ 2 ರಂದು ಮ್ಯಾನ್ಮಾರ್ (ಬರ್ಮಾ)ನ ಯಾಂಗೂನ್ ನಲ್ಲಿ ಜೈನ ಬನಿಯಾ ಕುಟುಂಬದ ಮಾಯಾಬೆನ್ ಮತ್ತು ರಾಮ್ನಿಕ್ಲಾಲ್ ರೂಪಾನಿ ದಂಪತಿಯ ಏಳನೇ ಮತ್ತು ಕಿರಿಯ ಪುತ್ರನಾಗಿ ವಿಜಯ್ ರೂಪಾನಿ ಜನಿಸಿದರು. ಬರ್ಮಾದಲ್ಲಿನ ರಾಜಕೀಯ ಅಸ್ಥಿರತೆಯಿಂದಾಗಿ ಅವರ ಕುಟುಂಬ 1960 ರಲ್ಲಿ ರಾಜ್ಕೋಟ್ ಗೆ ಸ್ಥಳಾಂತರಗೊಂಡಿತ್ತು.
ವಿಜಯ್ ರೂಪಾನಿ ಅವರು ಧರ್ಮೇಂದ್ರ ಸಿಂಹಜಿ ಕಲಾ ಕಾಲೇಜ್ ನಲ್ಲಿ ಬಿಎ ಬಳಿಕ ಸೌರಾಷ್ಟ್ರ ವಿವಿಯಿಂದ ಎಲ್ಎಲ್ಬಿ ಅಧ್ಯಯನ ಮಾಡಿದ್ದರು. ಉದ್ಯಮ ರಂಗಕ್ಕೆ ಇಳಿದ ವಿಜಯ್ ರೂಪಾನಿ ಅವರು ತಂದೆ ಸ್ಥಾಪಿಸಿದ ರಸಿಕ್ಲಾಲ್ & ಸನ್ಸ್ ಎಂಬ ಸಂಸ್ಥೆಯಲ್ಲಿ ಪಾಲುದಾರರಾಗಿ ಸ್ಟಾಕ್ ಬ್ರೋಕರ್ ಆಗಿ ಕೆಲಸ ಮಾಡಿದ್ದರು. ರೂಪಾನಿ 1971 ರಲ್ಲಿ ಜನಸಂಘಕ್ಕೆ ಸೇರ್ಪಡೆಯಾಗಿ ರಾಜಕೀಯ ಜೀವನ ಆರಂಭಿಸಿದ್ದರು. 1976 ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 11 ತಿಂಗಳು ಭುಜ್ ಮತ್ತು ಭಾವನಗರದ ಜೈಲುಗಳಲ್ಲಿ ಸೆರೆವಾಸವನ್ನೂ ಅನುಭವಿಸಿದ್ದರು.
1987 ರಲ್ಲಿ ರಾಜ್ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (ಆರ್ಎಂಸಿ) ನ ಕಾರ್ಪೊರೇಟರ್ ಆಗಿ ಮೊದಲ ಬಾರಿ ಆಯ್ಕೆಯಾದರು. 1996 ರಿಂದ 1997 ರವರೆಗೆ ರಾಜ್ಕೋಟ್ ನ ಮೇಯರ್ ಆಗಿದ್ದರು. 1998 ರಲ್ಲಿ ಅವರು ಬಿಜೆಪಿಯ ಗುಜರಾತ್ ಘಟಕದ ಪ್ರಧಾನ ಕಾರ್ಯದರ್ಶಿ, ಕೇಶುಭಾಯಿ ಪಟೇಲ್ ಅವರ ಮುಖ್ಯಮಂತ್ರಿ ಅವಧಿಯಲ್ಲಿ ಬಿಜೆಪಿ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
2006 ರಿಂದ 2012 ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ವಿಜಯ್ ರೂಪಾನಿ ನಾಲ್ಕು ಬಾರಿ ಬಿಜೆಪಿಯ ಗುಜರಾತ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು 2013 ರಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಮುನ್ಸಿಪಲ್ ಹಣಕಾಸು ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
2014 ಆಗಸ್ಟ್ ನಲ್ಲಿ, ಗುಜರಾತ್ ಸ್ಪೀಕರ್ ವಜುಭಾಯಿ ವಾಲಾ ಅವರು ರಾಜ್ಕೋಟ್ ಪಶ್ಚಿಮ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ, ತೆರವಾದ ಸ್ಥಾನಕ್ಕೆ ಉಪಚುನಾವಣೆಗೆ ಸ್ಪರ್ಧಿಸಿ ಭಾರೀ ಮತಗಳಿಂದ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. 2014 ರ ನವೆಂಬರ್ ನಲ್ಲಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ಮೊದಲ ಸಂಪುಟ ವಿಸ್ತರಣೆಯಲ್ಲಿ ಸಾರಿಗೆ, ನೀರು ಸರಬರಾಜು, ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
2016 ಫೆಬ್ರವರಿ 19 ರಂದು, ರೂಪಾನಿ ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು.ಇಂಡಿಯನ್ ಎಕ್ಸ್ಪ್ರೆಸ್ 2021 ರ ವರ್ಷದ ಭಾರತದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ರೂಪಾನಿ ಅವರ ಹೆಸರು ಪಟ್ಟಿ ಮಾಡಿತ್ತು.
ಆನಂದಿಬೆನ್ ಪಟೇಲ್ ಅವರ ಉತ್ತರಾಧಿಕಾರಿಯಾಗಿ 2016, ಆಗಸ್ಟ್ 7 ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ವಿಜಯ್ ರೂಪಾನಿ 2017 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರಾಜ್ಕೋಟ್ ಪಶ್ಚಿಮ ಕ್ಷೇತ್ರವನ್ನು ಉಳಿಸಿಕೊಂಡು ಮತ್ತೊಮ್ಮೆ 2017 ಡಿಸೆಂಬರ್ 22 ರಂದು ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು. ರೂಪಾನಿ 2021 ಸೆಪ್ಟೆಂಬರ್ 11 ರಂದು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಉತ್ತರಾಧಿಕಾರಿಯಾಗಿ ಭೂಪೇಂದ್ರ ಭಾಯಿ ಪಟೇಲ್ ಅಧಿಕಾರ ವಹಿಸಿಕೊಂಡಿದ್ದರು.
ವಿಜಯ್ ರೂಪಾನಿ ಅವರ ಪತ್ನಿ ಅಂಜಲಿ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ದಂಪತಿಗಳ ಹಿರಿಯ ಮಗ ರುಷಭ್ ಎಂಜಿನಿಯರಿಂಗ್ ಪದವೀಧರ. ಪುತ್ರಿ ರಾಧಿಕಾ ಚಾರ್ಟರ್ಡ್ ಅಕೌಂಟೆಂಟ್ ನಿಮಿತ್ ಮಿಶ್ರಾ ಅವರನ್ನು ವಿವಾಹವಾಗಿ ಲಂಡನ್ ನಲ್ಲಿ ನೆಲೆಸಿದ್ದಾರೆ. ರೂಪಾನಿ ಅವರ ಕಿರಿಯ ಪುತ್ರ ಪೂಜಿತ್ ಅಪಘಾತದಲ್ಲಿ ವಿಧಿವಶರಾಗಿದ್ದರು. ಅವರ ನೆನಪಿನಲ್ಲಿ ಪೂಜಿತ್ ರೂಪಾನಿ ಸ್ಮಾರಕ ಟ್ರಸ್ಟ್ ಅನ್ನು ಸ್ಥಾಪಿಸಿದ್ದರು.







