ಮಾಲಿನ್ಯ ತಪಾಸಣೆ ಪ್ರಮಾಣಪತ್ರವಿಲ್ಲದಿದ್ದರೆ ಇಂಧನವಿಲ್ಲ: ದಿಲ್ಲಿ ಪರಿಸರ ಸಚಿವ ಘೋಷಣೆ

Photo : PTI
ಹೊಸದಿಲ್ಲಿ, ಡಿ. 16: ಮಾನ್ಯ ಹೊಗೆ ತಪಾಸಣಾ ಪ್ರಮಾಣಪತ್ರ (ಪಿಯುಸಿಸಿ)ವಿಲ್ಲದ ವಾಹನಗಳಿಗೆ ದಿಲ್ಲಿಯ ಪಟ್ರೋಲ್ ಪಂಪ್ಗಳು ಗುರುವಾರದಿಂದ ಇಂಧನ ತುಂಬಿಸುವುದಿಲ್ಲ ಎಂದು ದಿಲ್ಲಿಯ ಪರಿಸರ ಸಚಿವ ಮಂಜಿಂದರ್ ಸಿಂಗ್ ಸೀರ್ಸ ಮಂಗಳವಾರ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ತೀವ್ರ ಅನಾರೋಗ್ಯಕರ ಮಟ್ಟಕ್ಕೆ ಇಳಿದ ಹಿನ್ನೆಲೆಯಲ್ಲಿ ದಿಲ್ಲಿ ಸಚಿವರು ಹೊಸ ಉಪಕ್ರಮವನ್ನು ಘೋಷಿಸಿದ್ದಾರೆ. ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ)ವು ನಿರಂತರ ಮೂರನೇ ದಿನವಾದ ಮಂಗಳವಾರವೂ ‘‘ಅತ್ಯಂತ ಕಳಪೆ’’ಯಾಗಿ ಮುಂದುವರಿದಿದೆ.
ಸೆಪ್ಟಂಬರ್ ತಿಂಗಳಲ್ಲಿ, ನಿಯಮಗಳ ಉಲ್ಲಂಘನೆಗಾಗಿ ಪೊಲೀಸರು ದಾಖಲಿಸಿಕೊಂಡ ಒಟ್ಟು ಪ್ರಕರಣಗಳ ಪೈಕಿ 54,615 ವಾಯು ಮಾಲಿನ್ಯ ತಪಾಸಣೆ ಪ್ರಮಾಣಪತ್ರವಿಲ್ಲದೆ ವಾಹನಗಳನ್ನು ಚಲಾಯಿಸಿರುವುದಕ್ಕೆ ಸಂಬಂಧಿಸಿರುವುದಾಗಿದೆ. ಅಂದರೆ ವಾಯು ಮಾಲಿನ್ಯ ತಪಾಸಣೆ ಪ್ರಮಾಣಪತ್ರವಿಲ್ಲದೆ ವಾಹನಗಳನ್ನು ಚಲಾಯಿಸಿದ ಪ್ರಮಾಣ 17 ಶೇಕಡ ಆಗಿದೆ. ಈ ಸಂಖ್ಯೆಯು ಅಕ್ಟೋಬರ್ನಲ್ಲಿ ಕೂಡ ಅಧಿಕವಾಗಿತ್ತು. ಅಂದರೆ ಪಿಯುಸಿಸಿ ಪ್ರಮಾಣಪತ್ರವಿಲ್ಲದೆ ವಾಹನಗಳನ್ನು ಚಲಾಯಿಸಿರುವುದಕ್ಕಾಗಿ 68,986 ಪ್ರಕರಣಗಳು (23 ಶೇಕಡ) ದಾಖಲಾಗಿದ್ದವು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸೀರ್ಸ, ‘‘ಇಂದು ವಾಯು ಗುಣಮಟ್ಟ ಸೂಚ್ಯಂಕ 363 ದಾಖಲಾಗಿದೆ. ಇದು ತೀವ್ರ ಮಾಲಿನ್ಯ ವಿಭಾಗದಲ್ಲಿ ಬರುತ್ತದೆ. ವಾಯು ಮಾಲಿನ್ಯವು ಕಳೆದ 10 ವರ್ಷಗಳಿಂದಲೂ ಇದೇ ಮಟ್ಟದಲ್ಲಿದೆ. ಕಳೆದ ವರ್ಷ ಇದೇ ದಿನ ಈ ಸಂಖ್ಯೆ 380 ಆಗಿತ್ತು. ಇಂದು ಅದು 363 ಆಗಿದೆ’’ ಎಂದು ಹೇಳಿದರು.
ಈ ಸಮಸ್ಯೆ ಹಿಂದಿನ ಸರಕಾರದ ವೈಫಲ್ಯವಾಗಿದೆ ಎಂದು ಅವರು ದೂರಿದರು. ‘‘ಆಪ್ ಕಳೆದ 10 ವರ್ಷಗಳಲ್ಲಿ ದಿಲ್ಲಿಗೆ ಈ ಸಮಸ್ಯೆಯನ್ನು ನೀಡಿದೆ’’ ಎಂದು ಸೀರ್ಸ ಹೇಳಿದರು.







